ರಾಜ್ಯದ ಬಿಜೆಪಿ ಸರ್ಕಾರ ಮಾನಗೇಡಿ ಸರ್ಕಾವಾಗಿದೆ : ಎಸ್ ಆರ್ ಪಾಟೀಲ್

ಬಾಗಲಕೋಟೆ

    ಸೂಕ್ಷ್ಮಸಂವೇದನೆಯನ್ನು ಕಳೆದುಕೊಂಡಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕಿವಿ, ಮೂಗು, ಕಣ್ಣು, ಚರ್ಮ ಇಲ್ಲದ ಮಾನಗೇಡಿ ಸರ್ಕಾರ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಟೀಕಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು, ರೇಷ್ಮೆ, ತೋಟಗಾರಿಕಾ ಬೆಳೆಗಳಿಗೆ ಎಷ್ಟು ಹಾನಿಯಾಗಿದೆಯೋ, ಅಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದೆ. ಆದರೆ, ಸರ್ಕಾರ ಇದಕ್ಕೆ ಒಪ್ಪಲಿಲ್ಲ. ನಾವು ಸಂತ್ರಸ್ತರ ಪರವಾಗಿ ನಿಂತಿದ್ದು, ಇದು ಪಂಚೇಂದ್ರಿಯಗಳಿಲ್ಲದ ಸರ್ಕಾರ ಎಂದು ಆರೋಪಿಸಿದರು.

    ಎರಡನೇ ಬಾರಿಗೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕನಾಗಿ ಹೈಕಮಾಂಡ್ ತಮ್ಮನ್ನು ಆಯ್ಕೆ ಮಾಡಿದೆ. ಕಾಯಾ ವಾಚಾ ಮನಸ್ಸಿನಿಂದ ವಿರೋಧ ಪಕ್ಷದಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ. ಜಿಲ್ಲೆಯ ಬಾದಾಮಿ ಶಾಸಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದಾರೆ. ವಿಧಾನಸಭೆ ಹಾಗೂ ಪರಿಷತ್ ವಿರೋಧ ಪಕ್ಷದ ನಾಯಕರಿಬ್ಬರೂ ಬಾಗಲಕೋಟೆ ಜಿಲ್ಲೆಯವರೆ ಆಗಿದ್ದು ವಿಶೇಷ ಚರಿತ್ರಾರ್ಹ ಎಂದರು.

     ವಿಧಾನಸಭೆ ಕಲಾಪದ ವರದಿ ಮಾಡಲು ಖಾಸಗಿ ಮಾಧ್ಯಮಗಳು ಮತ್ತು ಛಾಯಾಚಿತ್ರಗಾರರನ್ನು ಹೊರಗಿಟ್ಟಿದ್ದು ಸರಿಯಲ್ಲ. ವಿಧಾನಪರಿಷತ್ತಿನಲ್ಲಿ ನಮ್ಮ ಸಭಾಪತಿಗಳು ಎಲ್ಲಾ ಮಾಧ್ಯಮದವರಿಗೆ ಅವಕಾಶ ಕಲ್ಪಿಸಿದ್ದಾರೆ. ಜನರಿಂದ ಆಯ್ಕೆಯಾದ ನಾವು ಜನರ ಒಳಿತಿಗಾಗಿ ಹೇಗೆ ಕೆಲಸ ಮಾಡುತ್ತೇವೆ ಎಂಬುದನ್ನು ಜನ ಗಮನಿಸುತ್ತಾರೆ. ಆದ್ದರಿಂದ ಮಾಧ್ಯಮಗಳ ಕಣ್ಣಿಗೆ ಬಟ್ಟೆ ಕಟ್ಟಿ ಮಾಧ್ಯಮಗಳನ್ನು ಹೊರಗಿಡುವುದು ಸರಿಯಲ್ಲ ಎಂದರು.

     ಸಂವಿಧಾನಾತ್ಮಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಅವರಿಂದ ನಡೆಯುತ್ತಿದೆ. ಈ ದೇಶದ ಕಾಂಗ್ರೆಸ್ ಮುಖಂಡರ ಮನೆ ಮೇಲೆ ದಾಳಿ‌ ನಡೆಯುತ್ತಿದ್ದು, ಕೇವಲ‌ ಕಾಂಗ್ರೆಸ್ ನಾಯಕರನ್ನೇ ಕೇಂದ್ರಿಕರಿಸಿಕೊಂಡು ದಾಳಿ ಮಾಡಲಾಗುತ್ತಿದೆ. ಆದರೆ, ಕಾಂಗ್ರೆಸ್ ನವರು ಇದಕ್ಕೆ ಜಗ್ಗುವುದಿಲ್ಲ. ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ಮಾಡಿದರೇ, ತಾವು ಸಶಕ್ತರಾಗುತ್ತೇವೆ ಎಂಬುದು ಅಸಾಧ್ಯದ ಮಾತು ಎಂದು ಕಿಡಿಕಾರಿದರು.

      ಸಾರ್ವಜನಿಕ ಬದುಕಿನಿಂದ ಕಾಂಗ್ರೆಸ್ ನಾಯಕರು ನಿರ್ಗಮಿಸಬೇಕು. ಇಲ್ಲವೇ ತಮ್ಮ ಪಕ್ಷಕ್ಕೆ ಬರಬೇಕು ಎಂಬ ಕಾರಣಕ್ಕೆ ದಾಳಿ ಮಾಡಿಸುತ್ತಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ದಾಳಿ ಎಂಬುದು ತಮ್ಮ ಅಭಿಪ್ರಾಯ ಎಂದರು.ಸರ್ಕಾರದ ಖಜಾನೆ ಖಾಲಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಿಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕು ಎಂಬ ಉದ್ದೇಶವಿತ್ತು. ಆದರೆ ನಡೆಯಲಿಲ್ಲಾ. ನೆರೆ ಬಂದು ಆ ಭಾಗದ ಜನರಿಗೆ ಬಹಳ ತೊಂದರೆಯಾಗಿದೆ.

     ಈ ಹಿಂದೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ನಡೆಸಿದಾಗ ನಾವು ಬೆಳಗಾವಿಯಿಂದ ಅಧಿವೇಶನವನ್ನು ಬೆಂಗಳೂರಿಗೆ ಸ್ಥಳಾಂತರಿಸಲಿಲ್ಲ. ಆದರೀಗ ಅಧಿಕಾರಿಗಳು ಬೇಡ ಎಂದಿದ್ದಕ್ಕೆ ಬೆಂಗಳೂರಿಗೆ ಸ್ಥಳಾಂತರಿಸಿದ್ದು, ಬೆಂಗಳೂರಿನಲ್ಲಿ ಕೇವಲ‌ ಮೂರೇ ದಿನ ನಡೆಸಿದ್ದು ಏಕೆ ಎಂದು ಅವರು ಪ್ರಶ್ನಿಸಿದರು.

     ನೆರೆ ಸಂತ್ರಸ್ತರಿಗೆ ಐದು ಲಕ್ಷ ರೂ. ಬದಲಾಗಿ ಹತ್ತು ಲಕ್ಷ ರೂ ಪರಿಹಾರ ನೀಡುವಂತೆ ಒತ್ತಾಯಿಸಿದ್ದೇನೆ. ಈ ಹಿಂದೆ ಕೊಡಗಿನಲ್ಲಿ ಪ್ರವಾಹ ಸಂಭವಿಸಿದಾಗ ಹತ್ತು ಲಕ್ಷ ರೂ ಪರಿಹಾರವನ್ನು ನಮ್ಮ ಸರ್ಕಾರವೇ ನೀಡಿತ್ತು. ಈಗಲೂ ಎಲ್ಲಾ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ, ಕೃಷ್ಣಾ ಮೇಲ್ದಂಡೆ ಯೋಜನೆ ಮಾದರಿಯಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದೇನೆ. ಇದಕ್ಕೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಅಲ್ಲದೇ ಕೇಂದ್ರ ಸರ್ಕಾರ ಕೂಡ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap