ಬೆಂಗಳೂರು
ಕನ್ನಡ ಚಿತ್ರರಂಗದ ರೋರಿಂಗ್ ಸ್ಟಾರ್ ನಟ ಶ್ರೀ ಮುರಳಿ ಧಿಡೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿನಿಮಾ ಚಿತ್ರೀಕರಣದ ವೇಳೆ ನಡೆದ ಅವಘಡದಿಂದ ನಟ ಶ್ರೀ ಮುರಳಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ಸದ್ಯ ‘ಬಘೀರ’ ಸಿನಿಮಾ ಚಿತ್ರೀಕರಣದಲ್ಲಿ ಬ್ಯೂಸಿ ಇರುವ ಶ್ರೀ ಮುರಳಿ, ಈ ಚಿತ್ರದ ಶೂಟಿಂಗ್ ವೇಳೆ ನಡೆದ ದುರ್ಘಟನೆಯಿಂದ ಮತ್ತೆ ಅವರ ಕಾಲಿಗೆ ಪೆಟ್ಟಾಗಿದೆ. ಇದರಿಂದ ಬಘೀರ ಸಿನಿಮಾ ಚಿತ್ರೀಕರಣವನ್ನು ಮತ್ತೆ ಮುಂದೂಡಲಾಗಿದ್ದು, ಅನೇಕ ವರ್ಷಗಳ ಬಳಿಕ ಶ್ರೀ ಮುರಳಿ ಅವರನ್ನು ಮತ್ತೆ ತೆರೆ ಮೇಲೆ ಕಾಣಲು ಕಾತುರರಾರಿದ್ದ ಅಭಿಮಾನಿಗಳಿಗೆ ಬೇಸರವಾಗಿದೆ.
ಈ ಹಿಂದೆ ಚಿತ್ರದ ಫೈಟಿಂಗ್ ಸೀನ್ ಚಿತ್ರೀಕರಣದ ವೇಳೆ ಶ್ರೀ ಮುರಳಿ ಅವರ ಕಾಲಿಗೆ ಪೆಟ್ಟಾಗಿತ್ತು. ಇದರಿಂದ ಅವರು ಸರ್ಜರಿಗೆ ಒಳಗಾಗಿ ಎರಡು ತಿಂಗಳು ರೆಸ್ಟ್ ಮಾಡಿದ್ದರು. ಇದೀಗ ಮತ್ತೆ ಚಿತ್ರೀಕರಣ ಆರಂಭವಾದ ಹೊತ್ತಲ್ಲೇ ಮತ್ತೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಸದ್ಯ ನಟ ಶ್ರೀ ಮುರಳಿ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕನ್ನಡ ಚಿತ್ರರಂಗದ ರೋರಿಂಗ್ ಸ್ಟಾರ್ ಆಗಿರುವ ನಟ ಶ್ರೀ ಮುರಳಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದು, ಕೆಲ ವರ್ಷಗಳಿಂದ ಇವರ ಹೊಸ ಸಿನಿಮಾಕ್ಕಾಗಿ ಅಭಿಮಾನಿಗಳು ಕಾತುರರಾಗಿದ್ದಾರೆ. 2021ರ ‘ಮದಗಜ’ ಬಳಿಕ ಶ್ರೀ ಮುರಳಿ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹೀಗಾಗಿ ‘ಬಘೀರ’ ಸಿನಿಮಾ ಮೂಲಕ ಶ್ರೀ ಮುರಳಿ ಮತ್ತೆ ಬೆಳ್ಳಿ ತೆರೆ ಮೇಲೆ ಘರ್ಜಿಸಲು ಸಜ್ಜಾಗುತ್ತಿದ್ದರು.
‘ಬಘೀರ’ ಸಿನಿಮಾದ ಟೀಸರ್ ಈ ಮೊದಲು ರಿಲೀಸ್ ಆಗಿತ್ತು. ಈ ಚಿತ್ರದ ಬಗ್ಗೆ ಅತೀವ ನಿರೀಕ್ಷೆ ಇರುವುದರಿಂದ ಡ್ಯೂಪ್ ಬಳಸದೆ ಸ್ವತಃ ಶ್ರೀ ಮುರಳಿ ಅವರೇ ಸ್ಟಂಟ್ಗಳನ್ನು ಮಾಡುತ್ತಿದ್ದಾರೆ. ಈ ಮೊದಲು ಫೈಟಿಂಗ್ ಸೀನ್ ವೇಳೆ ಅವರ ಕಾಲಿಗೆ ಪೆಟ್ಟಾಗಿತ್ತು. ಎರಡು ತಿಂಗಳ ರೆಸ್ಟ್ ಬಳಿಕ ಮತ್ತೆ ಚಿತ್ರೀಕರಣಕ್ಕೆ ಬಂದ ನಟ ಶ್ರೀ ಮುರಳಿ ಇದೀಗ ಮತ್ತೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಅವರು ಬೇಗ ಚೇತರಿಸಿಕೊಂಡು ಚಿತ್ರ ಬಹುಬೇಗ ತೆರೆ ಮೇಲೆ ಬರಲಿ ಎನ್ನುವುದು ಅಭಿಮಾನಿಗಳ ಹಾರೈಕೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ