ಬಾಗಲಕೋಟೆ:
ಜಮಖಂಡಿ ತಾಲೂಕಿನ ತೊದಲಬಾಗಿ ಎಂಬ ಗ್ರಾಮದಲ್ಲಿ ಶ್ರೀರಾಮಸೇನೆ ತನ್ನ ಕಾರ್ಯಕರ್ತರಿಗೆ ಕೆಲ ತಿಂಗಳುಗಳಿಂದ ಬಂದೂಕು ಮತ್ತು ಯುದ್ಧಕಲೆ ತರಬೇತಿ ನೀಡುತ್ತಿರುವುದಾಗಿ ವರದಿಗಳಿಂದ ತಿಳಿದುಬಂದಿದೆ,
ವ್ಯಕ್ತಿತ್ವ ವಿಕಸನ ಹಾಗೂ ಸ್ವಸುರಕ್ಷೆಗಾಗಿ ವಿವಿಧ ಶಾರೀರಿಕ ರಕ್ಷಾ ತರಬೇತಿ ಎಂಬ ಹೆಸರಿನಲ್ಲಿ ಸೇನಾ ಮಾದರಿಯಲ್ಲಿ ಬಂದೂಕು ತರಬೇತಿ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
ತೊದಲಬಾಗಿ ಗ್ರಾಮದ ಗುಡ್ಡದಲ್ಲಿ ನಡೆದ ಶಿಬಿರದಲ್ಲಿ ದಂಡ ಪ್ರಯೋಗ, ಏರ್ ಗನ್ ಮೂಲಕ ಗನ್ ಟ್ರೈನಿಂಗ್, ಕರಾಟೆ, ಮುಳ್ಳುಗಂಟಿಯ ಗುಂಡಿಯಲ್ಲಿ ಹಾದುಹೋಗುವುದು, ಸಂದಿಗ್ಧ ಸ್ಥಳಗಳಲ್ಲಿ ಪಾರಾಗುವುದು, ಬಂದೂಕು ಬಳಕೆ, ಟಾರ್ಗೆಟ್ ಸೆಟ್ ಮಾಡಿ ಗುರಿ ಇಟ್ಟು ಹೊಡೆಯುವ ತರಬೇತಿ ನೀಡಲಾಗಿದ್ದು, ಈ ಕುರಿತ ವೀಡಿಯೊ ಮತ್ತು ಫೋಟೋಗಳು ಈಗ ವೈರಲ್ ಆಗಿವೆ.
ಆದಾಗ್ಯೂ, ಬಳಸಲಾಗುತ್ತಿರುವ ರೈಫಲ್‌ಗಳು ಏರ್‌ಗನ್‌ಗಳೇ (ಇವುಗಳಿಗೆ ಯಾವುದೇ ಪರವಾನಗಿ ಅಗತ್ಯವಿಲ್ಲ) ಅಥವಾ ಯಾವುದೇ ನಿಷೇಧಿತ ಶಸ್ತ್ರಾಸ್ತ್ರಗಳೇ ಎಂಬುದು ಖಚಿತವಿಲ್ಲ. ಏತನ್ಮಧ್ಯೆ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಜಿಲ್ಲಾಧ್ಯಕ್ಷರು ಅಥವಾ ಸೇನೆಯ ರಾಜ್ಯ ಅಧ್ಯಕ್ಷರು ಸಂಪರ್ಕಕ್ಕೆ ಸಿಕ್ಕಿಲ್ಲ.
ತಾಲ್ಲೂಕು ಅಧ್ಯಕ್ಷ ರವಿ ಪೂಜಾರ್ ಅವರು ಸಂಪರ್ಕಕ್ಕೆ ಸಿಕ್ಕಿದ್ದು, ಈ ಸಂಬಂದ ಮಾಹಿತಿಗಳ ಬಹಿರಂಗಪಡಿಸಲು ನಿರಾಕರಿಸಿದರು.ತೊದಲಬಾಗಿ ಗ್ರಾಮದಲ್ಲಿ ತರಬೇತಿ ನೀಡಿರುವುದು ಗಮನಕ್ಕೆ ಬಂದಿದೆ. ಕೆಲವು ಕೆಲಸದ ನಿಮಿತ್ತ ಸ್ಥಳದಿಂದ ಹೊರಗಿದ್ದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ ಎಂದರು.
ನಾನು ನಗರದಲ್ಲಿ ಇಲ್ಲದ ಕಾರಣ ತರಬೇತಿಯ ಬಗ್ಗೆ ಏನನ್ನೂ ಹೇಳಲಾರೆ. ತರಬೇತಿ ನಡೆದಿದೆ ಎಂದು ಮಾತ್ರ ತಿಳಿದಿದೆ, ಅದರ ಹೊರತಾಗಿ, ಹೆಚ್ಚಿನ ಮಾಹಿತಿ ನನಗೂ ತಿಳಿದಿಲ್ಲ ಎಂದು ತಿಳಿಸಿದರು.ಜಮಖಂಡಿ ಗ್ರಾಮ ವ್ಯಾಪ್ತಿಯ ಸಿಪಿಐ ಎಂ ಡಿ ಮಡ್ಡಿ ಅವರನ್ನು ಸಂಪರ್ಕಿಸಿದಾಗ, ಇನ್ನೂ ಈ ಬಗ್ಗೆ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ. ವಿಚಾರಣೆಯಲ್ಲಿ ಯಾವುದೇ ಅಕ್ರಮಗಳು ಪತ್ತೆಯಾದರೆ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು