ಸಿದ್ಧಗಂಗಾ ಮಠದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಜಾತ್ರೆ ವೈಭವ

ತುಮಕೂರು:

ಫೆ.18 ರಿಂದ ಮಾ.4ರವರೆಗೆ 58 ನೇ ಕೃಷಿ-ಕೈಗಾರಿಕಾ ವಸ್ತು ಪ್ರದರ್ಶನ, ಧನಗಳ ಜಾತ್ರೆ ಮೆರುಗು

ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಸಂದರ್ಭದಲ್ಲಿ ಜರುಗುವ ಪ್ರಸಿದ್ಧ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆ ಅಂಗವಾಗಿ ಫೆಬ್ರುವರಿ 18 ರಿಂದ ಮಾರ್ಚ್ 4ರವರೆಗೆ 15 ದಿನಗಳ ಕಾಲ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ, ದನಗಳ ಜಾತ್ರೆ ನಡೆಯಲಿದೆ ಎಂದು ವಸ್ತು ಪ್ರದರ್ಶನ ಟ್ರಸ್ಟ್ ಕಾರ್ಯಕಾರಿ ಸಮಿತಿ ಕಾರ್ಯದರ್ಶಿ ಬಿ.ಗಂಗಾಧರಯ್ಯ ತಿಳಿಸಿದರು.

ಶ್ರೀ ಸಿದ್ಧಗಂಗಾ ಮಠದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಆವರಣದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ವಸ್ತು ಪ್ರದರ್ಶನವನ್ನು ಸಣ್ಣ ನೀರಾವರಿ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸಲಿದ್ದು, ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಸಾನಿಧ್ಯ ವಹಿಸುವರು.

ಪ್ರದರ್ಶನದ ಅಂಗವಾಗಿ ಹಮ್ಮಿಕೊಂಡಿರುವ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಉದ್ಘಾಟಿಸಲಿದ್ದು, ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದಲ್ಲಿ ಕೈಗಾರಿಕೆ, ಕೃಷಿ, ಆರೋಗ್ಯ, ತೋಟಗಾರಿಕೆ, ಅರಣ್ಯ, ರೇಷ್ಮೆ, ನೀರಾವರಿ, ಶಿಕ್ಷಣ, ಪಶುಪಾಲನೆ, ಮೀನುಗಾರಿಕೆ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳು ಮಳಿಗೆಗಳನ್ನು ತೆರೆಯಲಿದ್ದು, 18 ಸರ್ಕಾರಿ ಹಾಗೂ 150 ಖಾಸಗಿ ಸೇರಿದಂತೆ ಒಟ್ಟು 168 ಮಳಿಗೆಗಳನ್ನು ತೆರೆಯಲಾಗುವುದು.

ವಸ್ತು ಪ್ರದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಪಾರಿತೋಷಕ ಹಾಗೂ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು ಎಂದರು. .ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಜಂಟಿ ಕಾರ್ಯದರ್ಶಿ ಕೆಂ.ಬ.ರೇಣುಕಯ್ಯ, ಎಸ್‍ಐಟಿಯ ಗ್ರಂಥಪಾಲಕ ಮೋಹನ್ ಉಪಸ್ಥಿತರಿದ್ದರು.

ಡಾ.ಶಿವಕುಮಾರಸ್ವಾಮೀಜಿ ಜೀವನ ದರ್ಶನ ಪರಿಚಯ

ವಸ್ತುಪ್ರದರ್ಶನ ಸಂದರ್ಭದಲ್ಲಿ ಪ್ರತಿನಿತ್ಯ ಸಂಜೆ ಬಯಲು ರಂಗಮಂದಿರದಲ್ಲಿ ಸುಗಮ ಸಂಗೀತ, ವಚನಗಾಯನ, ಭರತನಾಟ್ಯ, ಯಕ್ಷಗಾನ, ನಾಟಕ ಸೇರಿದಂತೆ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ. ವಸ್ತುಪ್ರದರ್ಶನದಲ್ಲಿ ಶಿವಕುಮಾರ ಸ್ವಾಮೀಜಿ ಅವರ ಜೀವನ ದರ್ಶನ ಪರಿಚಯ ಮಾಡಿಕೊಡುವ ಪ್ರದರ್ಶಿನಿಯನ್ನು ಏರ್ಪಡಿಸಲಾಗುವುದು ಎಂದು ವಸ್ತುಪ್ರದರ್ಶನ ಸಮಿತಿಯವರು ಮಾಹಿತಿ ನೀಡಿದರು.

ದನಗಳ ಜಾತ್ರೆ ರಾಸುಗಳಿಗೆ ಉಚಿತ ಪ್ರವೇಶ

ಶ್ರೀ ಮಠದಲ್ಲಿ ಫೆಬ್ರುವರಿ 23 ರಿಂದ ಮಾರ್ಚ್ 4ರವರೆಗೆ ಜರುಗಲಿರುವ ಶ್ರೀ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಉತ್ಸವ ಹಾಗೂ ದನಗಳ ಜಾತ್ರೆ ನಡೆಯಲಿದೆ. ದನಗಳ ಜಾತ್ರೆಗೆ ಆಗಮಿಸುವ ಜಾನುವಾರುಗಳಿಗೆ ಮಠದ ವತಿಯಿಂದ ನೀರು ಹಾಗೂ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುವುದು.

ಜಾತ್ರೆಗೆ ಆಗಮಿಸುವವರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುವುದು. ಈ ಬಾರಿ ವಸ್ತುಪ್ರದರ್ಶನಕ್ಕೆ ಬರುವ ರಾಸುಗಳಿಗೆ ಯಾವುದೇ ಶುಲ್ಕ ಪಡೆಯಬಾರದು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗಸ್ವಾಮೀಜಿ ಸೂಚಿಸಿದ್ದಾರೆಂದರು.

ವಸ್ತು ಪ್ರದರ್ಶನಕ್ಕೆ ರೈತಾಪಿ ಜನ, ಭಕ್ತಾದಿಗಳು, ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಮಂದಿ ಭೇಟಿ ನೀಡುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವೇಶದ್ವಾರದಲ್ಲಿ ಆರೋಗ್ಯ ಇಲಾಖೆಯಿಂದ ಕೋವಿಡ್ ಪರೀಕ್ಷೆ ಹಾಗೂ ಲಸಿಕಾಕರಣಕ್ಕೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಲಾಗುವುದು.

ಜನರಿಗೆ ಕುಡಿಯುವ ನೀರು, ನೈರ್ಮಲ್ಯತೆ, ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪಾಲಿಕೆ ಹಾಗೂ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿದೆ.

  –    ಎಸ್.ಶಿವಕುಮಾರ್, ಜಂಟಿ ಕಾರ್ಯದರ್ಶಿ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link