ಬೆಂಗಳೂರು:
ಜಗತ್ತಿನ ಕಠಿಣ ಸ್ಪರ್ಧೆ ಎಂದರೆ ಟ್ರಯಥ್ಲಾನ್ . ಈಜು, ಸೈಕ್ಲಿಂಗ್ ಮತ್ತು ಓಟ- ಈ ಮೂರನ್ನೂ ಒಳಗೊಂಡ ಸ್ಪರ್ಧೆಗೆ ಟ್ರಯಥ್ಲಾನ್ ಎನ್ನುತ್ತಾರೆ. ಕರ್ನಾಟಕದ ಶ್ರೀನಿವಾಸ್ ಪ್ರಭು ಮುಂಡ್ಕೂರು ಅವರು ಜೂನ್ 15ರಂದು ಚೆನ್ನೈನಲ್ಲಿ ನಡೆದಿದ್ದ ಟ್ರೈ2ಚಾಂಪ್ ಆಯೋಜಿಸಿದ್ದ ಟ್ರಯಾಥ್ಲಾನ್ ಸ್ಪರ್ಧೆಯನ್ನು ಮುಗಿಸಿ ಗಮನಸೆಳೆದಿದ್ದಾರೆ. ಬೆಂಗಳೂರಿನ 25 ವರ್ಷದ ಶ್ರೀನಿವಾಸ್ ಪ್ರಭು, ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿದ್ದಾರೆ. ಭಾಗವಹಿಸಿದ ಮೊದಲ ಟ್ರಯಾಥ್ಲಾನ್ನಲ್ಲೇ ಅವರು ಯಶಸ್ವಿಯಾಗಿ ಸ್ಪರ್ಧೆ ಮುಗಿಸಿದ ಹೆಗ್ಗಳಿಕೆ ಪಡೆದಿದ್ದಾರೆ. ಇದೀಗ ಅವರು ನವೆಂಬರ್ನಲ್ಲಿ ಗೋವಾದಲ್ಲಿ ನಡೆಯಲಿರುವ ಐರನ್ಮ್ಯಾನ್ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಟ್ರಯಥ್ಲಾನ್ ಎನ್ನುವುದು ಈಜು, ಸೈಕ್ಲಿಂಗ್ ಮತ್ತು ಓಟವನ್ನು ಒಳಗೊಂಡ ಕ್ರೀಡೆಯಾಗಿದೆ. ಈ ಮೂರು ವಿಭಾಗಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿದವರನ್ನು “ಐರನ್ ಮ್ಯಾನ್” ಎಂದು ಕರೆಯುತ್ತಾರೆ. ಸ್ಥಳೀಯವಾಗಿ ಆಯೋಜಿಸುವ ಟ್ರಯಥ್ಲಾನ್ ಸ್ಪರ್ಧೆಗಳಲ್ಲಿ 20 ಕಿ.ಮೀ. ಸೈಕ್ಲಿಂಗ್, 5 ಕಿ.ಮೀ. ಓಟ, 750 ಮೀಟರ್ ಈಜಬೇಕಾಗುತ್ತದೆ.
ಇದು ಜೂಡಿ ಮತ್ತು ಜಾನ್ ಕಾಲಿನ್ಸ್ ದಂಪತಿಯ ಕಲ್ಪನೆಯ ಕೂಸು. ಕಾಲಿನ್ಸ್ ಕುಟುಂಬವು 1974, ಸೆಪ್ಟೆಂಬರ್ 25ರಂದು ಅಮೆರಿಕದ ಕ್ಯಾಲಿಫೊರ್ನಿಯಾ ನಗರದ ಸ್ಯಾನ್ ಡಿಯಾಗೋದಲ್ಲಿ ಮಿಷನ್ ಬೇ ಟ್ರಯಥ್ಲಾನ್‌ನಲ್ಲಿ ಭಾಗವಹಿಸಿತ್ತು. ಮ್ಯಾರಥಾನ್‌ನಂತಹ ಸಣ್ಣ ಸ್ಪ್ರಿಂಟ್ ಇವೆಂಟ್‌ಗಳಲ್ಲಿ ಭಾಗವಹಿಸುವವರಿಗಾಗಿ ಏನಾದರೂ ಮಾಡಬೇಕು ಎನ್ನುವಾಗ ಅದಕ್ಕೆ ಸೈಕ್ಲಿಂಗ್ ಅನ್ನೂ ಸೇರಿಸುವ ಯೋಚನೆ ಬಂತು. 1978,ಫೆಬ್ರವರಿ 18ರಂದು, ಜೂಡಿ ಮತ್ತು ಕಾಲಿನ್ಸ್ ಮೊದಲ ಹವಾಯಿಯನ್ ಐರನ್ ಮ್ಯಾನ್ ಟ್ರಯಥ್ಲಾನ್‌ನೊಂದಿಗೆ ತಮ್ಮ ಕನಸು ನನಸಾಗಿಸಿದರು. ಯಾರು ಮೊದಲು ಮುಗಿಸುತ್ತಾರೋ ಅವರನ್ನು ಐರನ್ ಮ್ಯಾನ್ ಎನ್ನಲಾಗುತ್ತದೆ ಮೊದಲೇ ಇಬ್ಬರೂ ನಿರ್ಧರಿಸಿದ್ದರು. 1980ರ ಬಳಿಕ ಇದು ವಿಶ್ವ ಮನ್ನಣೆ ಪಡೆಯಿತು.
ಭಾರತದಲ್ಲಿ ಮೊದಲ ಬಾರಿಗೆ ಐರನ್ ಮ್ಯಾನ್ ಸ್ಪರ್ಧೆ ಶುರುವಾಗಿದ್ದು 2019ರ ಅಕ್ಟೋಬರ್‌ನಲ್ಲಿ. ಯೋಸ್ಕ್ ಎನ್ನುವ ಸಂಸ್ಥೆಯೊಂದು ಫ್ರಾಂಚೈಸಿಯಾಗಿ ಇದನ್ನು ಪ್ರತಿ ವರ್ಷ ಆಯೋಜಿಸುತ್ತದೆ. ಇವೆಂಟ್‌ನಲ್ಲಿ ಗೋವಾದ ಮಿರಾಮರ್ ಬೀಚ್‌ನಲ್ಲಿ 1.9 ಕಿ.ಮೀ. ತೆರೆದ ನೀರಿನಲ್ಲಿ ಈಜು, 90 ಕಿ.ಮೀ. ಸೈಕ್ಲಿಂಗ್ ಮತ್ತು ಪಣಜಿಯಾದ್ಯಂತ 21 ಕಿ.ಮೀ. ಓಟ, ಆ ಎಲ್ಲಾ ಚಟುವಟಿಕೆಗಳನ್ನು ಒಂದು ದಿನದಲ್ಲಿ ನಿಗದಿತ ಸಮಯ ಅಂದರೆ 8 ಗಂಟೆ 30 ನಿಮಿಷದೊಳಗೆ ಅನುಕ್ರಮವಾಗಿ ಮಾಡಲಾಗುತ್ತದೆ. ಫುಲ್ ಐರನ್ ಮ್ಯಾನ್ ಆಗಲು 3.8 ಕಿ.ಮೀ. ಈಜು, 18 ಕಿ.ಮೀ. ಸೈಕ್ಲಿಂಗ್ ಮತ್ತು 42.2 ಕಿ.ಮೀ. ಓಟವನ್ನು 16 ಅಥವಾ 17 ಗಂಟೆಯೊಳಗೆ ಮುಗಿಸಬೇಕು.








