ಇಂದಿನಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ-2 ಆರಂಭ

ಬೆಂಗಳೂರು:

    ಇಂದು ಶುಕ್ರವಾರ ಜೂನ್ 14ರಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ-2 ಆರಂಭವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸುತ್ತಿರುವ ಪರೀಕ್ಷೆ ಸುಸೂತ್ರವಾಗಿ ನಡೆಯಲು ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟುವ ಸಲುವಾಗಿ ನಿಗಧಿಪಡಿಸಿದ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, 1973 ರ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 144 (1) ರಂತೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆಯಾ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

    2024ರ ಎಸ್​ಎಸ್​ಎಲ್​ಸಿ ಪರೀಕ್ಷೆ-2 ಜೂನ್ 22ರವರೆಗೆ ನಡೆಯಲಿದೆ. ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ 2,23,308 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 1,44,160 ಬಾಲಕರು ಮತ್ತು 79,148 ಬಾಲಕಿಯರಿದ್ದಾರೆ. ಒಟ್ಟು ನೋಂದಣಿಯಲ್ಲಿ 13,085 ವಿದ್ಯಾರ್ಥಿಗಳು ಫಲಿತಾಂಶ ವೃದ್ಧಿಗಾಗಿ ಪರೀಕ್ಷೆ ತೆಗೆದುಕೊಂಡಿದ್ದಾರೆ.

   ರಾಜ್ಯದ 724 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಏಳು ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಪ್ರತೀ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಪ್ರಶ್ನೆ ಪತ್ರಿಕೆ ಅಭಿರಕ್ಷಕರು, ಸ್ಥಾನಿಕ ಜಾಗೃತ ದಳದವರು ಹಾಗೂ ಕೊಠಡಿ ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸುತ್ತಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

    ಜಿಲ್ಲಾ ಮತ್ತು ತಾಲ್ಲೂಕು ಹಂತಗಳ ವಿಚಕ್ಷಣ ದಳಗಳು ಪರೀಕ್ಷಾ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತವೆ. ಜಿಲ್ಲಾಧಿಕಾರಿಗಳಿಂದ ನಿಯೋಜಿತ ಇತರೆ ಇಲಾಖೆಗಳ ಜಾಗೃತ ದಳಗಳು ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲಿವೆ. ಪ್ರತೀ ಕೇಂದ್ರದಲ್ಲಿಯೂ ಸಿಸಿಟಿವಿಗಳ ಮೂಲಕ ಪರೀಕ್ಷಾ ಅವ್ಯವಹಾರಗಳ ಬಗ್ಗೆ ನಿಗಾ ಇಡಲಾಗುತ್ತದೆ ಎಂದು ಮಂಡಳಿ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ