ನವದೆಹಲಿ:
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ಶಾಂತಿಯುತವಾಗಿ ಆರಂಭವಾಗಿದ್ದು, ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ದ್ವೇಷವನ್ನು ಸೋಲಿಸುವ ಮೂಲಕ ದೇಶದ ಮೂಲೆ ಮೂಲೆಗಳಲ್ಲಿ ‘ಮೊಹಬ್ಬತ್ ಕಿ ದುಕಾನ್’ ತೆರೆಯುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತದಾರರಿಗೆ ಮನವಿ ಮಾಡಿದ್ದಾರೆ.
ಇಂದು ಮೊದಲ ಹಂತದ ಮತದಾನವಾಗಿದೆ! ನೆನಪಿಡಿ, ನಿಮ್ಮ ಪ್ರತಿಯೊಂದು ಮತವೂ ಭಾರತದ ಪ್ರಜಾಪ್ರಭುತ್ವ ಮತ್ತು ಅದರ ತಲೆಮಾರುಗಳ ಭವಿಷ್ಯವನ್ನು ನಿರ್ಧರಿಸುತ್ತದೆ. ಕಳೆದ 10 ವರ್ಷಗಳಲ್ಲಿ ದೇಶದ ಆತ್ಮಕ್ಕೆ ಉಂಟಾದ ಗಾಯದ ಮೇಲೆ ನಿಮ್ಮ ಮತದ ಮುಲಾಮು ಹಚ್ಚಿ ಪ್ರಜಾಪ್ರಭುತ್ವವನ್ನು ಬಲಪಡಿಸಿ’ ಎಂದು ರಾಹುಲ್ ಗಾಂಧಿ ‘X’ ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.’ದ್ವೇಷವನ್ನು ಸೋಲಿಸುವ ಮೂಲಕ ದೇಶದ ಮೂಲೆ ಮೂಲೆಯಲ್ಲಿ ‘ಮೊಹಬ್ಬತ್ ಕಿ ದುಕಾನ್’ (ಪ್ರೀತಿಯ ಅಂಗಡಿ) ತೆರೆಯಿರಿ’ ಎಂದು ಹೇಳಿದ್ದಾರೆ.
ಎಂಎಸ್‌ಪಿಗೆ ಕಾನೂನು ಖಾತರಿ, ಬಡ ಕುಟುಂಬದ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂ. ಮತ್ತು ರಾಷ್ಟ್ರವ್ಯಾಪಿ ಜಾತಿ ಗಣತಿ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ಖಾತರಿಗಳ ಗ್ರಾಫಿಕ್ ಅನ್ನು ಸಹ ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.
ದೇಶದ 102 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ಬೆಳಗ್ಗೆ ಆರಂಭವಾಗಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರಾ ಹಾಗೂ ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿ ಸೇರಿದಂತೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯುತ್ತಿದೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಭೂಪೇಂದ್ರ ಯಾದವ್, ಕಿರಣ್ ರಿಜಿಜು, ಸಂಜೀವ್ ಬಲಿಯಾನ್, ಜಿತೇಂದ್ರ ಸಿಂಗ್, ಅರ್ಜುನ್ ರಾಮ್ ಮೇಘವಾಲ್ ಮತ್ತು ಸರ್ಬಾನಂದ ಸೋನೋವಾಲ್ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ. ಕಾಂಗ್ರೆಸ್‌ನ ಗೌರವ್ ಗೊಗೊಯ್, ಡಿಎಂಕೆಯ ಕನಿಮೋಳಿ ಮತ್ತು ಬಿಜೆಪಿಯ ಕೆ ಅಣ್ಣಾಮಲೈ ಕೂಡ ಕಣದಲ್ಲಿದ್ದಾರೆ.
ಅರುಣಾಚಲ ಪ್ರದೇಶ (60 ಸ್ಥಾನಗಳು) ಮತ್ತು ಸಿಕ್ಕಿಂ (32 ಸ್ಥಾನಗಳು) ವಿಧಾನಸಭೆ ಚುನಾವಣೆಗಳು ಸಹ ಏಕಕಾಲದಲ್ಲಿ ನಡೆಯುತ್ತಿವೆ.ಬಿಜೆಪಿ ನೇತೃತ್ವದ ಎನ್‌ಡಿಎ ಈ ಬಾರಿಯೂ ಪ್ರಬಲ ಬಹುಮತ ಪಡೆಯಲು ಬಯಸುತ್ತಿದ್ದು, ವಿಪಕ್ಷಗಳ ಇಂಡಿಯಾ ಮೈತ್ರಿಕೂಟವು ಸಹ ಮತ್ತೆ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ.