ವಾಷಿಂಗ್ಟನ್:
ಗಗನಯಾತ್ರಿಗಳನ್ನು ಚಂದ್ರ, ಮಂಗಳ ಸೇರಿದಂತೆ ಅದರಾಚೆಗಿನ ಗ್ರಹಗಳೆಡೆಗೆ ಕಳುಹಿಸಲು ವಿನ್ಯಾಸಗೊಳಿಸಲಾದ ಹಾಗೂ ಇದುವರೆಗೆ ನಿರ್ಮಿಸಲಾದ ಅತ್ಯಂತ ಶಕ್ತಿಶಾಲಿ ರಾಕೆಟ್ ಸ್ಟಾರ್‌ಶಿಪ್ ಉಡಾವಣೆಗೊಂಡು ಕೆಲವೇ ಕ್ಷಣಗಳಲ್ಲಿ ವಿಫಲಗೊಂಡಿದೆ. ಮಂಗಳವಾರ ಟೆಕ್ಸಾಸ್‌ನಿಂದ ತನ್ನ ಒಂಬತ್ತನೇ ಸಿಬ್ಬಂದಿರಹಿತ ಪರೀಕ್ಷಾ ಉಡಾವಣೆಯಲ್ಲಿ ಬಾಹ್ಯಾಕಾಶಕ್ಕೆ ಹಾರಿತು. ಆದರೆ ಬಾಗಿಲಿನ ಅಸಮರ್ಪಕ ಕಾರ್ಯ ಮತ್ತು ಇಂಧನ ಸೋರಿಕೆಯಿಂದಾಗಿ ಮಿಷನ್ ವಿಫಲವಾಯಿತು. ಯಾವುದೇ ಗಾಯಗಳು ವರದಿಯಾಗಿಲ್ಲವಾದರೂ, ಚಂದ್ರ ಮತ್ತು ಮಂಗಳ ಗ್ರಹಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಎಲೋನ್ ಮಸ್ಕ್ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಇದು ಮತ್ತೊಂದು ಹಿನ್ನಡೆಯಾಗಿದೆ.
ಈ ವರ್ಷದ ಆರಂಭದಲ್ಲಿ ಎರಡು ಸ್ಫೋಟಕ ವೈಫಲ್ಯಗಳ ನಂತರ, ಸ್ಪೇಸ್‌ಎಕ್ಸ್ ಮಂಗಳವಾರ ಸಂಜೆ ದಕ್ಷಿಣ ಟೆಕ್ಸಾಸ್‌ನಲ್ಲಿರುವ ತನ್ನ ಸ್ಟಾರ್‌ಬೇಸ್ ಸೈಟ್‌ನಿಂದ ಮತ್ತೊಂದು ಸ್ಟಾರ್‌ಶಿಪ್ ಉಡಾವಣೆಯನ್ನು ಪ್ರಯತ್ನಿಸಿತು. ಇದು ಭವಿಷ್ಯದ ಚಂದ್ರ ಮತ್ತು ಮಂಗಳ ಯಾತ್ರೆಗಳಿಗಾಗಿ ವಿನ್ಯಾಸಗೊಳಿಸಲಾದ ಎಲೋನ್ ಮಸ್ಕ್ ಅವರ 403-ಅಡಿ ಮೆಗಾ ರಾಕೆಟ್‌ನ ಒಂಬತ್ತನೇ ಡೆಮೊ ಹಾರಾಟವಾಗಿದೆ.
ಬಾಹ್ಯಾಕಾಶ ನೌಕೆಯು ಹಿಂದೂ ಮಹಾಸಾಗರದಲ್ಲಿ ಯೋಜಿತ ಸ್ಪ್ಲಾಶ್‌ಡೌನ್ ಕಡೆಗೆ ಸಾಗುತ್ತಿದ್ದಂತೆ, ಸ್ಪೇಸ್‌ಎಕ್ಸ್ ಕ್ಷಿಪ್ರ ಅನಿರ್ದಿಷ್ಟ ಸಮಸ್ಯೆಗಳನ್ನು ಎದುರಿಸಿತು. ಮೊದಲ ಬಾರಿಗೆ ಮರುಬಳಕೆ ಮಾಡಲಾದ ಬೂಸ್ಟರ್ ಸಂಪರ್ಕ ಕಳೆದುಕೊಂಡ ನಂತರ ಮೆಕ್ಸಿಕೋ ಕೊಲ್ಲಿಗೆ ಅಪ್ಪಳಿಸಿತು. ಸ್ಪೇಸ್‌ಎಕ್ಸ್ ಸ್ಟಾರ್‌ಶಿಪ್‌ನ ಥರ್ಮಲ್ ಟೈಲ್ಸ್ ಮತ್ತು ಮರುಪ್ರವೇಶ ಸಾಮರ್ಥ್ಯಗಳನ್ನು ಪರೀಕ್ಷಿಸಲು ಈ ಉಡಾವಣೆಯನ್ನು ಮಾಡಿತ್ತು. ಆದರೆ ಬಾಹ್ಯಾಕಾಶ ನೌಕೆ ನಿಯಂತ್ರಣ ಕಳೆದುಕೊಂಡ ಕಾರಣ ಆ ಗುರಿಗಳು ಸಹ ವಿಫಲವಾದವು. ಯೋಜನೆಗಳ ಪ್ರಕಾರ ಸ್ಟಾರ್‌ಶಿಪ್ ತನ್ನ ಪ್ರಾಯೋಗಿಕ ಹಾರಾಟವನ್ನು 90 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿ ಹಿಂದೂ ಮಹಾಸಾಗರದಲ್ಲಿ ನಿಯಂತ್ರಿತ ಇಳಿಯುವಿಕೆ ಮತ್ತು ಸ್ಪ್ಲಾಶ್‌ಡೌನ್‌ನೊಂದಿಗೆ ಪೂರ್ಣಗೊಳಿಸಬೇಕಿತ್ತು.
ಎರಡು ವರ್ಷಗಳ ಹಿಂದೆ ಸ್ಟಾರ್‌ಶಿಪ್‌ನ ರಾಕೆಟ್ ಇದೇ ರೀತಿಯ ಹಿನ್ನಡೆಯನ್ನು ಅನುಭವಿಸಿತ್ತು. ಟೆಕ್ಸಾಸ್‌ನ ಬೋಕಾ ಚಿಕಾದಲ್ಲಿರುವ ಸ್ಟಾರ್‌ಬೆಸ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಸ್ಟಾರ್ ಶಿಪ್ ರಾಕೆಟ್ ಅನ್ನು ಪ್ರಾಯೋಗಿಕವಾಗಿ ಹಾರಿಸಲಾಗಿತ್ತು. ಆದರೆ ಅದು ಕೆಲವೇ ಕ್ಷಣಗಳಲ್ಲಿ ಸ್ಪೋಟಗೊಂಡಿತ್ತು.
