ಇಂದಿನಿಂದ ನರ್ಸರಿ, ಅಂಗನವಾಡಿ ಶುರು

ಬೆಂಗಳೂರು:

         ಪೂರ್ಣ ಪ್ರಮಾಣದ ಶೈಕ್ಷಣಿಕ ಚಟುವಟಿಕೆ ರಾಜ್ಯದಲ್ಲಿ ಪುನರಾರಂಭ ,ಕೋವಿಡ್-19 ಸುರಕ್ಷತಾ ಕ್ರಮಗಳ ಪಾಲನೆಯೊಂದಿಗೆ ಇಂದಿನಿಂದ ರಾಜ್ಯದಲ್ಲಿ ಎಲ್‍ಕೆಜಿ, ಯುಕೆಜಿ ತರಗತಿಗಳು ಹಾಗೂ ಅಂಗನವಾಡಿಗಳು ಆರಂಭಗೊಳ್ಳುತ್ತಿದ್ದು ರಾಜ್ಯದಲ್ಲಿ ಪೂರ್ಣ ಪ್ರಮಾಣದ ಶೈಕ್ಷಣಿಕ ಚಟುವಟಿಕೆ ಪುನರಾರಂಭಗೊಳ್ಳಲು ಕ್ಷಣಗಣನೆ ಶುರುವಾಗಿದೆ.

ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ದೈನಂದಿನ ವೇಳಾಪಟ್ಟಿಯಂತೆ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 3.30ಕ್ಕೆ ಮಾತ್ರ ಎಲ್‍ಕೆಜಿ ಮತ್ತು ಯುಕೆಜಿ ಭೌತಿಕ ತರಗತಿಗಳನ್ನು ನಡೆಸಲು ಅನುಮತಿ ನೀಡಲಾಗಿದೆ. ಅಂಗನವಾಡಿಗಳಿಗೆ ಬೆಳಿಗ್ಗೆ 10ರಿಂದ ಅಪರಾಹ್ನ 12ರವರೆಗೆ ಮಾತ್ರ ತೆರೆಯಲು ಅನುಮತಿ ಕಲ್ಪಿಸಲಾಗಿದೆ. ಸತತ 20 ತಿಂಗಳಿಂದ ಶಾಲೆಯತ್ತ ಮುಖ ಮಾಡದ ಚಿಣ್ಣರು ಇಂದಿನಿಂದ ಹೆಗಲಿಗೆ ಬ್ಯಾಗ್ ಪೇರಿಸಿಕೊಂಡು ಕೈಯಲ್ಪಿ ಲಂಚ್ ಬಾಕ್ಸ್ ಹಿಡಿದು ಮಾಂಟೆಸ್ಸರಿ, ಶಿಶುವಿಹಾರಗಳತ್ತ ಮುಖಮಾಡಲಿದ್ದಾರೆ.

ಕೋವಿಡ್ 19 ಸೋಂಕು ದೃಢ ಪ್ರಮಾಣ ಶೇ.2ಕ್ಕಿಂತ ಕಡಿಮೆ ಇರುವ ತಾಲ್ಲೂಕುಗಳಲ್ಲಿ ಮಾತ್ರ ತರಗತಿಗಳನ್ನು ಆರಂಭಿಸಲು ಅನುಮತಿ ನೀಡಲಾಗಿದ್ದು ಭೌತಿಕ ತರಗತಿಗಳನ್ನು ಆರಂಭಿಸುವ ಮೊದಲು ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಬೇಕು. ತರಗತಿಗಳಿಗೆ ಹಾಜರಾಗುವ ಮಕ್ಕಳ ಪಾಲಕರಿಂದ ಒಪ್ಪಿಗೆ ಪತ್ರ ತರುವುದು ಹಾಗೂ ಶಾಲಾ ಸಿಬ್ಬಂದಿ ಮತ್ತು ಮಕ್ಕಳ ಪೋಷಕರು ಎರಡು ಡೋಸ್ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಹಲವು ನಿಬಂಧನೆಗಳನ್ನು ತರಗತಿ ಆರಂಭದ ಮಾರ್ಗಸೂಚಿಯಲ್ಲಿ ಸರಕಾರ ಹೇಳಿದ್ದು, ತರಗತಿ ಆರಂಭದ ಖುಷಿ ಒಂದೆಡೆಯಾದರೆ, ಕೋವಿಡ್ ನಿಯಮಗಳ ಪಾಲನೆಯ ಅರಿವಿಲ್ಲದ ಚಿಣ್ಣರು ತರಗತಿಗಳಲ್ಲಿ ಹೇಗಿರುತ್ತಾರೆ, ಆರೋಗ್ಯಕ್ಕೆ ಅಪಾಯ ತಂದುಕೊಂಡರೆ ಹೇಗೆಂಬ ಚಿಂತೆ ಪೋಷಕರನ್ನು ಕಾಡುತ್ತಿದೆ.

ಶಾಲೆಗೆ ಆಗಮಿಸುವ ಪ್ರತಿಯೊಂದು ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸಲು ಸೂಚಿಸಲಾಗಿದ್ದು, ಮಕ್ಕಳು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಹೊರತುಪಡಿಸಿ ಬೇರೆಯವರಿಗೆ ಶಾಲೆ ಆವರಣದೊಳಗೆ ಪ್ರವೇಶ ನೀಡದಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಮಾಂಟೆಸ್ಸರಿಯಲ್ಲಿ ಪಾಲಿಸಬೇಕಾದ ನಿಯಮಗಳು
*ಶಿಕ್ಷಕರು, ಸಿಬ್ಬಂದಿ ಹಾಗೂ ಪೋಷಕರು 2 ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯ
*ತರಗತಿಗೆ ಹಾಜರಾಗಲು ಮಕ್ಕಳ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ
*ಮನೆಯಿಂದಲೇ ಮಕ್ಕಳು ಉಪಾಹಾರ ತರಬೇಕು.
*ಶಾಲೆಗಳಲ್ಲಿ ಕುಡಿಯಲು ಬಿಸಿ ನೀರು, ಕೈ ಸ್ವಚ್ಛತೆಗೆ ಸಾಬೂನು ಒದಗಿಸಬೇಕು.
*ಜ್ವರ ಕೆಮ್ಮು ನೆಗಡಿ ಇರುವ ಮಕ್ಕಳು ಶಾಲೆಗೆ ಬರುವಂತಿಲ್ಲ.
*ಶಾಲೆಯಲ್ಲಿ ಮಕ್ಕಳಿಗೆ ಸೋಂಕು ಕಂಡು ಬಂದರೆ ಶಾಲೆ ಬಂದ್.
*ಕನಿಷ್ಠ 1 ಮೀಟರ್ ಅಂತರದಲ್ಲಿ ತರಗತಿಯಲ್ಲಿ ಮಕ್ಕಳನ್ನು ಕೂಡಿಸಬೇಕು.
*ಶಾಲೆ ಪ್ರಾಂಗಣ, ತರಗತಿ, ಪಾಠೋಪಕರಣ, ಪೀಠೋಪಕರಣಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಿರಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

Recent Articles

spot_img

Related Stories

Share via
Copy link
Powered by Social Snap