ಮದ್ಯ ಪ್ರಿಯರಿಗೆ ಕಿಕ್‌ ಏರಿಸುವ ಸುದ್ದಿ ಕೊಟ್ಟ ರಾಜ್ಯ ಸರ್ಕಾರ…!

ಬೆಂಗಳೂರು:

   ಮದ್ಯ ಪ್ರಿಯರಿಗೆ ಕಿಕ್‌ ಏರಿಸುವ ಸುದ್ದಿಯನ್ನು ರಾಜ್ಯ ಸರಕಾರ  ನೀಡಿದ್ದು, ಜುಲೈ ಒಂದರಿಂದ ಮದ್ಯದ ದರಗಳನ್ನು ಕಡಿಮೆ  ಮಾಡುತ್ತಿದೆ. ಭಾರಿ ಬೆಲೆಯ ಪ್ರೀಮಿಯಂ ಬ್ರಾಂಡ್‌ಗಳ  ಮದ್ಯದ ದರಗಳು ಜುಲೈ 1ರಿಂದ ಇಳಿಕೆಯಾಗಲಿವೆ.

    ಇತರ ರಾಜ್ಯಗಳ ಮದ್ಯದ ದರಗಳಿಗೆ ಸಮೀಪಿಸುವಂತೆ ರಾಜ್ಯದ ದರ ಪರಿಷ್ಕರಿಸುವುದಾಗಿ ಸಿಎಂ ಸಿದ್ದರಾಮಯ್ಯ  ಅವರು ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಹೇಳಿದ್ದರು. ಈ ಘೋಷಣೆಯು ಈಗ ಜಾರಿಯಾಗಲಿದೆ. ರಾಜ್ಯ ಸರ್ಕಾರವು ವರಮಾನ ಸಂಗ್ರಹ ಹೆಚ್ಚಿಸಿಕೊಳ್ಳುವುದಕ್ಕಾಗಿ ಹೀಗೆ ಮಾಡುತ್ತಿದೆ.

   ಹೆಚ್ಚುವರಿ ಅಬಕಾರಿ ತೆರಿಗೆ ರಾಜ್ಯದಲ್ಲಿ ಹೆಚ್ಚು ಇರುವ ಕಾರಣದಿಂದ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮದ್ಯದ ದರ ದುಬಾರಿಯಾಗಿದೆ. ಈ ಕಾರಣದಿಂದ ದೊಡ್ಡ ಪ್ರಮಾಣದಲ್ಲಿ ನೆರೆಯ ರಾಜ್ಯಗಳಿಂದಲೂ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಪೂರೈಕೆಯಾಗುತ್ತಿರುವುದೂ ಕಂಡುಬರುತ್ತಿದೆ. ಗಡಿ ಭಾಗದ ಜಿಲ್ಲೆಗಳ ಜನರು ನೆರೆಯ ರಾಜ್ಯಗಳಿಗೆ ಹೋಗಿ ಮದ್ಯ ಖರೀದಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಅಬಕಾರಿ ತೆರಿಗೆ ನಷ್ಟವಾಗುತ್ತಿದೆ.

   ಮದ್ಯ ಮಾರಾಟ ಹೆಚ್ಚಿಸಿ, ಅಬಕಾರಿ ತೆರಿಗೆ ಮೂಲದ ವರಮಾನವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ದರ ಪರಿಷ್ಕರಣೆ ಮಾಡಲಾಗಿದೆ. ಮೊದಲ ಐದು ಸ್ಲಾಬ್‌ಗಳಲ್ಲಿ ಈಗ ಇರುವ ಹೆಚ್ಚುವರಿ ಅಬಕಾರಿ ತೆರಿಗೆ ವ್ಯತ್ಯಾಸವಾಗುತ್ತಿಲ್ಲ. ಆದರೆ, ಆರರಿಂದ 16ನೇ ಸ್ಲಾಬ್‌ಗಳಲ್ಲಿ ಹೆಚ್ಚುವರಿ ಅಬಕಾರಿ ತೆರಿಗೆ ದರ ಗಣನೀಯವಾಗಿ ಇಳಿಕೆಯಾಗಲಿದೆ. ಈ ಬಗ್ಗೆ ಅಬಕಾರಿ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.

    ಈಗ 750 ಎಂ.ಎಲ್. ಗಾತ್ರದ ಬಾಟಲಿಗೆ ₹2,000 ದರ ಇರುವ ಬ್ರಾಂಡ್‌ಗಳ ಮದ್ಯದ ದರವು ಜುಲೈ 1ರಿಂದ ₹1,700ರಿಂದ ₹1,800ಕ್ಕೆ ಇಳಿಕೆಯಾಗಲಿದೆ. ಪ್ರತಿ ಬಾಟಲಿಗೆ ₹5,000 ದರ ಇರುವ ಬ್ರಾಂಡ್ ಮದ್ಯಗಳ ದರ ₹3,600ರಿಂದ 23,700ಕ್ಕೆ ಇಳಿಯಲಿದೆ. ಪ್ರತಿ ಬಾಟಲಿಗೆ 27,100 ಇರುವ ಮದ್ಯದ ದರ 5,200ರ ಅಸುಪಾಸಿಗೆ ಕಡಿಮೆಯಾಗುವ ಸಾಧ್ಯತೆಯೂ ಇದೆ.

   ಸೆಮಿ ಪ್ರೀಮಿಯಂ ಮತ್ತು ಪ್ರೀಮಿಯಂ ಸ್ಲ್ಯಾಬ್‌ಗಳ ಮದ್ಯದ ದರ ಸಾಕಷ್ಟು ದುಬಾರಿಯೇ ಇದೆ. ಈ ಹಿನ್ನೆಲೆಯಲ್ಲಿ ಕರಡು ಅಧಿಸೂಚನೆ ಪ್ರಕಟಿಸಿದ ಸರಕಾರ, ಜುಲೈ 1ರಿಂದ ಪರಿಷ್ಕೃತ ಮದ್ಯ ದರ ಅನ್ವಯಿಸಲಿದೆ ಎಂದು ಗೊತ್ತಾಗಿದೆ. ಗ್ಯಾರಂಟಿಗಳಿಗೆ ಹಣ ಹೊಂಚಬೇಕಾದ ಸ್ಥಿತಿಯಲ್ಲಿರುವ ಸರಕಾರ, ವರಮಾನ ಹೆಚ್ಚಳಕ್ಕಾಗಿ ಹೆಚ್ಚುವರಿ ಅಬಕಾರಿ ತೆರಿಗೆ (ಎಇಡಿ) ಇಳಿಕೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ. 

    ಸರ್ಕಾರದ ಬೊಕ್ಕಸಕ್ಕೆ ಮದ್ಯಪ್ರಿಯರು ಭರ್ಜರಿ ಕಿಕ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ದರ ಏರಿಕೆ ನಡುವೆಯೂ ಮದ್ಯ ಮಾರಾಟ ಬಾರಿ ಹೆಚ್ಚಳ ಕಂಡಿದೆ. 2023-24ನೇ ಸಾಲಿನಲ್ಲಿ ಸಾವಿರಾರು ಕೋಟಿ ರೂಪಾಯಿ ರಾಜ್ಯ ಸರ್ಕಾರದ ಖಜಾನೆ ಸೇರಿದೆ.

   ಅಬಕಾರಿ ಇಲಾಖೆಗೆ ವಾರ್ಷಿಕ 34,500 ಕೋಟಿ ರೂಪಾಯಿ ಟಾರ್ಗೆಟ್ ಅನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡಿತ್ತು. ಈಗ 2023-24ನೇ ಸಾಲಿನಲ್ಲಿ ಅಬಕಾರಿ ಇಲಾಖೆಯು ಟಾರ್ಗೆಟ್ ರೀಚ್ ಮಾಡಿದೆ. ಕಳೆದ ಏಪ್ರಿಲ್‌ನಿಂದ ಮಾರ್ಚ್‌ವರೆಗೆ ಹೆಚ್ಚುವರಿ 128 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ.

    2023-24ನೇ ಸಾಲಿನಲ್ಲಿ 34,628 ಕೋಟಿ ರೂಪಾಯಿ ಆದಾಯವು ಅಬಕಾರಿ ಇಲಾಖೆಗೆ ಹರಿದುಬಂದಿದೆ. ಕಳೆದ ವರ್ಷ 29,920 ಕೋಟಿ ರೂಪಾಯಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸಂಗ್ರಹ ಮಾಡಿದ್ದರು. ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಮದ್ಯ ದರ ಪರಿಷ್ಕರಣೆ ಮಾಡಲಾಗಿದೆ. ಆದರೂ, ತಲೆಕೆಡಿಸಿಕೊಳ್ಳದೆ ಮದ್ಯ ಪ್ರಿಯರು ಮದ್ಯ ಖರೀದಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap