ಬೆಂಗಳೂರು :
ಲಾಕ್ಡೌನ್ ತೆರವುಗೊಳಿಸಿದ ಹಿನ್ನೆಲೆ ಇಂದಿನಿಂದ ಬೆಂಗಳೂರು ಸೇರಿದಂತೆ ಲಾಕ್ಡೌನ್ ಹೊರತುಪಡಿಸಿದ ಪ್ರದೇಶದಲ್ಲಿ ಬಸ್ ಸಂಚಾರ ಆರಂಭವಾಗಲಿದೆ.
ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದ್ದು, ಬಸ್, ಆಟೋ-ಟ್ಯಾಕ್ಸಿ ಸೇರಿದಂತೆ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿತ್ತು. ಇಂದಿನಿಂದ ಲಾಕ್ಡೌನ್ ಅಂತ್ಯವಾಗಿರುವುದರಿಂದ ಬಸ್ ಸಂಚಾರ ಆರಂಭವಾಗಲಿದೆ.
ಬಸ್ ಸೇವೆ ಪುನಾರಂಭವಾದ ಹಿನ್ನೆಲೆ ಚಾಲಕರು ಮತ್ತು ಪ್ರಯಾಣಿಕರು ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಕರ್ತವ್ಯದ ವೇಳೆ, ಚಾಲಕರು ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಸ್ಯಾನಿಟೈಸರ್ ಬಳಸಿ ಶುಚಿತ್ವ ಕಾಪಾಡುವುದು ಮತ್ತು ನಿಗದಿತ ನಿಲುಗಡೆಗಳಲ್ಲಿ ಪ್ರಯಾಣಿಕರನ್ನು ಹತ್ತಿಸುವುದು ಇಳಿಸುವುದಕ್ಕೆ ಸೂಚಿಸಲಾಗಿದೆ.
ಪ್ರಯಾಣಿಕರು ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಲಾಗಿದೆ. ಮಾಸ್ಕ್ ಧರಿಸದವರಿಗೆ ಬಸ್ ಹತ್ತಲು ಅವಕಾಶ ಇರುವುದಿಲ್ಲ. ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ಬಸ್ ಹತ್ತುವುದು, ಇಳಿಯುವುದು ಮಾಡಬೇಕು. ಆಸನಗಳು ಭರ್ತಿಯಾಗಿದ್ದಲ್ಲಿ ಬಸ್ ಹತ್ತಬಾರದು ಮತ್ತು ಶೀತ, ಕೆಮ್ಮು, ಜ್ವರ ಇರುವರು ಬಸ್ ಹತ್ತದಂತೆ ಬಿಎಂಟಿಸಿ ಸೂಚಿಸಿದೆ.
ಬುಧವಾರ ಬೆಳಗ್ಗೆಯಿಂದಲೇ ಬಿಎಂಟಿಸಿ ಸಂಚಾರ ಆರಂಭವಾಗಿದ್ದು 1500 ಬಸ್ ಸಂಚರಿಸಲಿವೆ ಎಂದು ಹೇಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ