ಕೊರೊನಾ 2ನೇ ಅಲೆ ಅಪ್ಪಳಿಸುವ ಮುನ್ನವೆ ಇರಲಿ ಎಚ್ಚರಿಕೆ

 ತುಮಕೂರು:

      ಕಳೆದ 15 ದಿನಗಳಿಂದ ಇಳಿಮುಖವಾಗಿಯೇ ಸಾಗಿದ್ದ ಕೊರೊನಾ ಸೋಂಕು ಪ್ರಕರಣಗಳು ಶುಕ್ರವಾರ ದಿಢೀರ್ ಏರಿಕೆಯಾಗಿದೆ. ಎರಡಂಕಿಯ 50ರ ಒಳಗೆ ಆಸುಪಾಸಿನಲ್ಲಿ ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ ಶುಕ್ರವಾರದಂದು ದಿಢೀರ್ 73 ಪ್ರಕರಣಗಳು ವರದಿಯಾಗುವ ಮೂಲಕ ಮತ್ತೆ ಏರುಗತಿಯ ಆತಂಕ ಮೂಡಿಸಿದೆ.

      ಅಕ್ಟೋಬರ್ ತಿಂಗಳಾಂತ್ಯಕ್ಕೆ ಕಡಿಮೆಯಾಗುತ್ತಾ ಬಂದ ಕೊರೊನಾ ಸೋಂಕು ಪ್ರಕರಣಗಳು ನವೆಂಬರ್ ತಿಂಗಳಿನಲ್ಲಿ ಮತ್ತಷ್ಟು ಇಳಿಕೆ ಕಂಡವು. ನವೆಂಬರ್ ಮೊದಲ ವಾರ 100 ರಿಂದ 150ರ ಗಡಿಯೊಳಗೆ ಸೋಂಕು ಪ್ರಕರಣ ಜಿಲ್ಲೆಯಲ್ಲಿ ಪ್ರತಿದಿನ ವರದಿಯಾಗುತ್ತಿದ್ದವು. ನವೆಂಬರ್ 11 ರಂದು 148 ಸೋಂಕು ಪ್ರಕರಣಗಳು ಖಚಿತವಾಗಿದ್ದವು. ಆನಂತರ ದಿನೆ ದಿನೆ ಕಡಿಮೆಯಾಗುತ್ತಾ ಬಂದ ಕೇಸುಗಳು 50ರ ಒಳಗೆ ಇಳಿಮುಖವಾದವು. ಇದನ್ನು ಗಮನಿಸುತ್ತಾ ಹೋದಂತೆ ಜಿಲ್ಲೆಯಲ್ಲಿ ಸೋಂಕು ಕಡಿಮೆಯಾಗುತ್ತಿದೆ ಎಂದೇ ಎಲ್ಲರೂ ಭಾವಿಸಿದ್ದಾರೆ.

      ಕಳೆದ ಮೂರ್ನಾಲ್ಕು ತಿಂಗಳ ಪ್ರಕರಣಗಳನ್ನು ಅವಲೋಕಿಸಿದಾಗ ಜಿಲ್ಲೆಯಲ್ಲಿ ಅತ್ಯಧಿಕ ಪ್ರಕರಣ 408 ಸಂಖ್ಯೆ ಒಂದು ದಿನ ವರದಿಯಾಗಿ ಗಾಬರಿ ಮೂಡಿಸಿತ್ತು. ಅಂದರೆ, ದಿನವೊಂದಕ್ಕೆ 300 ರಿಂದ 400 ರವರೆಗೆ ಒಂದು ವಾರಗಳ ಕಾಲ ಸೋಂಕು ಪ್ರಕರಣಗಳು ಕಂಡುಬಂದಿದ್ದವು. ಕೊರೊನಾ ಸೋಂಕಿನ ಉಚ್ರಾಯ ಸ್ಥಿತಿ ಇದಾಗಿತ್ತು. ಈ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮಗಳ ಕಟ್ಟುನಿಟ್ಟಿನ ಪಾಲನೆಯಾಗುತ್ತಿದ್ದವು. ಸರ್ಕಾರದ ನೀತಿ ನಿಬಂಧನೆಗಳು ಇನ್ನೂ ಸ್ವಲ್ಪ ಮಟ್ಟಿಗೆ ಮುಂದುವರೆದಿದ್ದವು. ಜನತೆ ಸಹ ಎಚ್ಚರಿಕೆಯಿಂದ ಇದ್ದರು. ಮಾಸ್ಕ್ ಧರಿಸುವುದು, ಸ್ವಲ್ಪ ಮಟ್ಟಿಗೆ ಅಂತರದ ನಿಯಮ ಕಾಪಾಡುವುದು ಗುಂಪುಗೂಡಲು ಹಿಂದೇಟು ಹಾಕುವುದು ಇತ್ಯಾದಿ ಪ್ರಜ್ಞೆ ಜನರಲ್ಲಿತ್ತು.

      ಸೋಂಕಿನ ಬಗ್ಗೆ ಜಾಗೃತಿ ಹೆಚ್ಚುತ್ತಾ ಹೋದಂತೆ, ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಾ ಹೋದಂತೆ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಾ ಬಂದವು. ಕಳೆದ ಎರಡು ತಿಂಗಳಿನಿಂದ ಸೋಂಕು ಇಳಿಕೆಯಾಗುತ್ತಿರುವುದರಿಂದ ಜನತೆಯಲ್ಲಿ ಸಹಜವಾಗಿಯೇ ಭಯ ಮರೆಯಾದಂತೆ ಕಂಡುಬರುತ್ತಿದೆ. ನಿಯಮಗಳು ಉಲ್ಲಂಘನೆಯಾಗುತ್ತಿವೆ. ಸರ್ಕಾರದ – ಆಡಳಿತದ ಪಾಲು ಇಲ್ಲಿ ಪ್ರಮುಖವಾಗಿದೆ.
ಜಿಲ್ಲಾಡಳಿತವು ಕೊರೊನಾ ನಿಯಂತ್ರಣಕ್ಕೆ ಹೆಚ್ಚು ಗಮನ ಹರಿಸಬೇಕು. ಆದರೆ ಇತ್ತೀಚೆಗೆ ನಿಯಮಗಳು ಸಡಿಲಿಕೆಯಾಗಿ ಆಡಳಿತದ ಪಾಲನೆಗಳು ನಿಷ್ಕ್ರಿಯವಾಗುತ್ತಿವೆ. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ನಗರಾಡಳಿತ, ಕಂದಾಯ ಇಲಾಖೆ, ಮಹಿಳಾ ಇಲಾಖೆ ಹೀಗೆ ಕೊರೊನಾ ನಿಯಂತ್ರಣಕ್ಕೆ ಹೆಚ್ಚು ಜವಾಬ್ದಾರಿ ವಹಿಸಬೇಕಿರುವ ಇಲಾಖೆಗಳೆಲ್ಲವು ಕೊರೊನಾಗೆ ಕೈ ಚೆಲ್ಲಿ ಕುಳಿತುಬಿಟ್ಟಿರುವಂತೆ ಭಾಸವಾಗುತ್ತಿದೆ. ಮಾಸ್ಕ್ ಧರಿಸುವ, ಅಂತರ ಕಾಪಾಡುವ, ಸ್ವಚ್ಛತೆ ಬಗ್ಗೆ ಎಚ್ಚರಿಕೆ ವಹಿಸುವ ಕಾರ್ಯಗಳು ವಿವಿಧ ಇಲಾಖೆಗಳಿಂದ ನಡೆಯಬೇಕು. ಜಾಗೃತಿ ಮೂಡಿಸುವುದರ ಜೊತೆಗೆ ತಮ್ಮ ಇಲಾಖೆಗಳಿಗೆ ಬರುವ ಜನರಿಗೆ ಈ ಬಗ್ಗೆ ಎಚ್ಚರಿಕೆ ನೀಡಬೇಕು.
ಆದರೆ ಈಗ ಆಗುತ್ತಿರುವುದಾದರೂ ಏನು? ಯಾವುದೇ ಇಲಾಖೆಗೆ ಹೋದರೂ ಅಲ್ಲಿನ ಸಿಬ್ಬಂದಿಗಳೇ ಮಾಸ್ಕ್ ಧರಿಸುತ್ತಿಲ್ಲ. ಇಲಾಖೆಗಳಲ್ಲಿಯೂ ಸಮರ್ಪಕ ಸ್ವಚ್ಛತಾ ವ್ಯವಸ್ಥೆಗಳಿಲ್ಲ. ಇನ್ನು ಸ್ಯಾನಿಟೈಸರ್ ವ್ಯವಸ್ಥೆಯಂತೂ ಮರೆಯಾಗಿ ಬಹಳ ದಿನಗಳೇ ಆಗಿವೆ. ಇಲಾಖೆಗಳಿಗೆ ಬರುವ ಸಾರ್ವಜನಿಕರನ್ನು ವ್ಯವಸ್ಥಿತವಾಗಿ ನಿಯಂತ್ರಣ ಹೇರಿ ಅವರ ಕೆಲಸ ಕಾರ್ಯಗಳನ್ನು ನಿಯಮಿತವಾಗಿ ಮಾಡುವಂತಹ ಯಾವುದೇ ಯೋಜನೆಗಳು ಇಲಾಖೆಯಲ್ಲಿ ಸಿದ್ಧವಾಗಿಲ್ಲ. ಗುಂಪುಗೂಡಿ ಜನರು ಹೋದರು ಆ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ.
ರಾಜ್ಯದ ಬಹಳಷ್ಟು ಕಡೆ ಮಾಸ್ಕ್ ಧರಿಸದೆ ಓಡಾಡುವ ಜನರನ್ನು ಹಿಡಿದು ಪೊಲೀಸ್ ಹಾಗೂ ನಗರಾಡಳಿತ ದಂಡ ವಿಧಿಸುವ ಪ್ರಕ್ರಿಯೆಯಲ್ಲಿ ತೊಡಗಿವೆ. ಭಯಕ್ಕಾದರೂ ಜನ ಮಾಸ್ಕ್ ಧರಿಸಲು ಮುಂದಾಗುತ್ತಾರೆ. ತುಮಕೂರು ಹಾಗೂ ಜಿಲ್ಲೆಯ ಬಹುತೇಕ ಕಡೆ ಜನರಿಗೆ ಇದರ ಭಯವಿಲ್ಲ. ಕಚೇರಿಗಳಲ್ಲಿಯೂ ಮಾಸ್ಕ್ ಇಲ್ಲದೆ ಜನನಿಬಿಡ ಪ್ರದೇಶಗಳಲ್ಲಿಯೂ ಮಾಸ್ಕ್ ಧರಿಸದೆ ಓಡಾಡುತ್ತಿರುವುದರಿಂದ ಮುಂದಿನ ಎರಡನೇ ಅಲೆಯ ಸೋಂಕು ಹರಡುವಿಕೆಗೆ ನಾವೇ ಕಾರಣೀಭೂತರಾಗುತ್ತಿದ್ದೇವೆಯೇ ಎಂಬ ಪ್ರಜ್ಞೆ ಏಕೆ ಮೂಡುತ್ತಿಲ್ಲ?

 2ನೇ ಅಲೆ : ಆಡಳಿತಕ್ಕಿರಲಿ ಎಚ್ಚರ :

      ಸೋಂಕು ಹರಡುವ ತಾಣಗಳ ಬಗ್ಗೆ ಆಡಳಿತ ಎಚ್ಚರಿಕೆ ವಹಿಸಬೇಕು. ಅಂತಹ ಕಡೆಗಳಿಗೆ ನಿರ್ಬಂಧ ವಿಧಿಸಬೇಕು. ಈಗ ಎಲ್ಲಿಯೂ ನಿರ್ಬಂಧಗಳಿಲ್ಲ. ಜನತೆ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಸೋಂಕು ನಿಯಂತ್ರಣಕ್ಕೆ ಶ್ರಮಿಸಬೇಕಾದ ಸಹಭಾಗಿತ್ವದ ಇಲಾಖೆಗಳಲ್ಲಿ ಒಮ್ಮತದ ಕಾರ್ಯಕ್ಷಮತೆ ಇಲ್ಲ. ಇಲಾಖೆಗಳಲ್ಲಿಯೇ ಮಾಸ್ಕ್ ಧರಿಸದೆ ಕೆಲಸ ಮಾಡುವವರಿದ್ದಾರೆ. ಅಂತರ ಕಾಪಾಡಿಕೊಂಡು ಕೆಲಸ ಕಾರ್ಯ ಮಾಡಿಕೊಡುವ ಹೊಣೆಗಾರಿಕೆ ಇಲಾಖೆಗಳಲ್ಲಿ ಮೂಡಬೇಕಿದೆ.

      ಕೊರೊನಾ ಇಡೀ ವಿಶ್ವದಲ್ಲಿಯೇ ಜನರ ಮನಸ್ಸನ್ನು ಬದಲಿಸಿದೆ. ಬದಲಾವಣೆಯ ಕಾಲಘಟ್ಟಕ್ಕೆ ಅನುಗುಣವಾಗಿ ಇಲಾಖೆಗಳು , ಅಧಿಕಾರಿಗಳು ನೌಕರ ಸಿಬ್ಬಂದಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಕೊರೊನಾ ಸೋಂಕಿನ ಎರಡನೇ ಅಲೆ ಅಪ್ಪಳಿಸದ ರೀತಿಯಲ್ಲಿ ಮುಂಜಾಗ್ರತೆ ವಹಿಸಬೇಕು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap