ಮಂಡ್ಯ:
ಚಿರತೆ ದಾಳಿಗೆ 10 ಕುರಿಗಳು ಸತ್ತು ಬಿದ್ದಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕು ದೇವಲಾಪುರ ಹೋಬಳಿಯ ಗೌರಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ದೇವಲಾಪುರ ಹೋಬಳಿಯ ಮುದ್ದನಕೊಪ್ಪಲು ಗ್ರಾಮದ ಸುರೇಶ್ ಬೋರಿಕೊಪ್ಪಲು ಗ್ರಾಮದ ತಮ್ಮ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದಾರೆ. ಮನೆಯ ಪಕ್ಕದಲ್ಲೆ ಕೊಟ್ಟಿಗೆಯೊಂದನ್ನು ಮಾಡಿಕೊಂಡಿದ್ದು, ರಾತ್ರಿ ವೇಳೆ ಅಲ್ಲಿಗೆ ತಮ್ಮ ಕುರಿಗಳನ್ನು ಕೂಡಿ ಹಾಕುತ್ತಿದ್ದರು.
ನಿನ್ನೆ ರಾತ್ರಿ 9 ಗಂಟೆಯಲ್ಲಿ ಕುರಿ ಕೊಟ್ಟಿಗೆಗೆ ನುಗ್ಗಿದ ಚಿರತೆ ಕುರಿಗಳನ್ನು ಹೊತ್ತೊಯ್ದಿದೆ. ಮತ್ತೆ ತನ್ನ ಮರಿಗಳೊಂದಿಗೆ ಬಂದ ಚಿರತೆ 8 ಕುರಿಗಳ ಮೇಲೆ ದಾಳಿ ನಡೆಸಿದೆ, ರಕ್ತಸ್ರಾವದಿಂದ ಗಾಯಗೊಂಡು ಸ್ಥಳದಲ್ಲಿಯೇ 8 ಕುರಿಗಳು ಸಾವನ್ನಪ್ಪಿದ್ದು, ಎರಡು ಕುರಿಗಳನ್ನು ಚಿರತೆ ಹೊತ್ತೊಯ್ದಿದೆ.
ಕುರಿಗಳ ಸಾವಿನಿಂದ ಸುಮಾರು 75 ಸಾವಿರ ರೂ. ನಷ್ಟವಾಗಿದೆ ಎಂದು ರೈತ ಅಳಲು ತೋಡಿಕೊಂಡಿದ್ದು, ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ