ಬೆಂಗಳೂರು:
ಅರಣ್ಯೀಕರಣಕ್ಕೆ ಆದ್ಯತೆ ನೀಡಿದ ಪರಿಣಾಮ ಶೇ. 2ರಷ್ಟು ಹಸಿರು ಪ್ರಮಾಣ ಹೆಚ್ಚಾಗಿದೆ ಎಂದು ಅರಣ್ಯ ಸಚಿವ ಆರ್. ಶಂಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳಲ್ಲಿ ಐದು ಕೋಟಿಗೂ ಹೆಚ್ಚು ಸಸಿ ನೆಡಲಾಗಿದೆ. ಇದರಲ್ಲಿ ಶೇ. 30ರಿಂದ 40ರಷ್ಟು ಗಿಡಗಳು ಉಳಿದುಕೊಂಡಿವೆ. ಈ ವರ್ಷ 10 ಕೋಟಿ ಸಸಿಗಳನ್ನು ನೆಡುವ ಗುರಿ ಇರಿಸಿಕೊಳ್ಳಲಾಗಿದೆ. ಬೀಜದ ಉಂಡೆ ಕಾರ್ಯಕ್ರಮವನ್ನು ಮುಂದುವರೆಸಲಾಗಿದ್ದು, ಇದಕ್ಕಾಗಿ ಬಜೆಟ್‍ನಲ್ಲಿ 10 ಕೋಟಿ ರೂ. ನಿಗದಿ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಮಾಲಿನ್ಯ ತಡೆಗೂ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರು ಎಕರೆ 20 ಸಸಿಗಳನ್ನು ನೆಡಬೇಕು ಅರಣ್ಯ ಇಲಾಖೆ ಸಹಾಯ ಮಾಡಲಿದೆ. ಸಸಿ ನೆಡಲು ಅರ್ಜಿ ಕರೆಯಲಾಗಿದೆ. ಒಂದು ಸಸಿಗೆ ವರ್ಷಕ್ಕೆ ನೂರು ರೂಪಾಯಿಯನ್ನು ಇಲಾಖೆ ನೀಡಲಿದೆ. ಅರ್ಜಿ ಹಾಕಿದ ರೈತರಿಗೆ ಸಸಿ ನೀಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡುವ ಕುರಿತಂತೆ ಗುರುವಾರ ಸಭೆ ನಡೆಸಲಾಗುತ್ತಿದೆ. ಸಂಪೂರ್ಣ ನಿಷೇಧ ಮಾಡುವ ಮುನ್ನ ಆಗುವ ಸಾಧಕ ಬಾಧಕಗಳ ಕುರಿತು ಚರ್ಚೆ ಮಾಡಲಾಗುತ್ತಿದೆ. ಈಗಾಗಲೇ ವಿಧಾನಸೌಧದಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲಾಗುತ್ತಿದೆ. ಇಂತಹ ಯೋಜನೆಗಳಿಗೆ ಸಾರ್ವಜನಿಕರ ಸಹಕಾರ ಅವಶ್ಯ ಎಂದತು.
ಇಂಜಿನಿಯರ್‍ಗಳ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವೇಶ್ವರಯ್ಯನವರ ಹುಟ್ಟೂರಾಗಿರುವ ಮುದ್ದೇನಹಳ್ಳಿಗೆ ತೆರಳಿ ಅಲ್ಲಿ ಅವರ ಪುತ್ಥಳಿಯನ್ನು ಅನಾವರಣ ಮಾಡಲಾಯಿತು.
ಕಾರ್ಯಕ್ರಮ ಮುಗಿದ ನಂತರ ಅಲ್ಲಿಂದ ಬೇರೆ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರು ತಾವು ನಿರ್ಮಾಣ ಮಾಡಿದ್ದ ವಿಶ್ವೇಶ್ವರಯ್ಯ ಪುತ್ಥಳಿಗೂ ಗೌರವ ಸೂಚಿಸಿ ಮಾಲಾರ್ಪಣೆ ಮಾಡಬೇಕು ಎಂದು ಆಗ್ರಹಿಸಿದರು. ಅಲ್ಲಿಗೂ ತೆರಳಿ ಮಾಲಾರ್ಪಣೆ ಮಾಡಿದ್ದೇನೆ. ಆದರೆ, ಈ ವಿಷಯವಾಗಿ ಗೊಂದಲ ಮೂಡಿದೆ.
ನಾಡಿಗೆ ಕೊಡುಗೆ ನೀಡಿರುವ ವಿಶ್ವೇಶ್ವರಯ್ಯ ಅವರನ್ನು ಮರೆಯುವಂತಹ ವ್ಯಕ್ತಿ ನಾನಲ್ಲ. ನನ್ನ ಪುತ್ರ ಜನಿಸಿರುವುದು ಕೂಡಾ ಸೆಪ್ಟೆಂಬರ್ 15ರಂದು. ಆತನನ್ನು ಇಂಜಿನಿಯರಿಂಗ್ ಓದಿಸಿದ್ದೇನೆ ಎಂದು ಸಮರ್ಥಿಸಿಕೊಂಡಿರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ