ಬೆಂಗಳೂರು :
ಶೈಕ್ಷಣಿಕ ಸಾಲಿನ ಆರಂಭದಲ್ಲಿ ವಿದ್ಯಾರ್ಥಿಗಳಿಗೆ 2 ಜೊತೆ ಸಮವಸ್ತ್ರ ವಿತರಿಸಲು ಕೂಡಲೇ ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿದ್ದಾರೆ.
ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಇನ್ಮುಂದೆ ಎರಡು ಜೊತೆ ಸಮವಸ್ತ್ರ ನೀಡಲು ಸರ್ಕಾರ ರೆಡಿಯಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಎರಡು ಜೊತೆ ಸಮವಸ್ತ್ರ ನೀಡಲು ತಿಳಿಸಿದ್ದಾರೆ.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ ಮುಖ್ಯಮಂತ್ರಿಗಳು, 2019-20ನೇ ಸಾಲಿನಿಂದ ಶಾಲಾ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ನೀಡಲು ತೀರ್ಮಾನ ಕೈಗೊಂಡಿದ್ದಾರೆ. ಹೀಗಾಗಿ ಈ ವರ್ಷದಿಂದಲೇ ಸರ್ಕಾರಿ ಶಾಲಾ ಮಕ್ಕಳಿಗೆ ಎರಡು ಜೊತೆಯ ಸಮವಸ್ತ್ರ ಸಿಗಲಿದೆ.
ಅಂದಹಾಗೇ, ಕಳೆದ ವರ್ಷ ವಿದ್ಯಾರ್ಥಿಗಳಿಗೆ ಒಂದು ಜೊತೆ ಸಮವಸ್ತ್ರವನ್ನು ವಿತರಿಸಲಾಗಿತ್ತು. ಎರಡು ಜೊತೆ ಸಮವಸ್ತ್ರ ನೀಡುವಂತೆ ಶೈಕ್ಷಣಿಕ ವರ್ಷದ ಕೊನೆಯಲ್ಲೇ ಆದೇಶ ನೀಡಲಾಗಿತ್ತು. ಆದರೇ ಶೈಕ್ಷಣಿಕ ವರ್ಷದ ಕೊನೆಯ ದಿನಗಳು ಆಗಿದ್ದರಿಂದ ಬಹುಪಾಲು ವಿದ್ಯಾರ್ಥಿಗಳಿಗೆ ವಿತರಿಸಲು ಸಾಧ್ಯವಾಗಿರಲಿಲ್ಲ.
ಇದನ್ನು ಮನಗಂಡಿರುವ ಸಿಎಂ ಕುಮಾರಸ್ವಾಮಿ ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳಿಗೆ 2 ಜೊತೆ ಸಮವಸ್ತ್ರ ವಿತರಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ