ಬೆಂಗಳೂರು:
ಕೊರೊನಾ ಆತಂಕದ ನಡುವೆಯೂ ವಿದ್ಯಾರ್ಥಿಗಳು ಭಾರೀ ನಿರೀಕ್ಷೆಯಿಂದ ಕಾದಿದ್ದ 2020ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಕೊನೆಗೂ ಹೊರಬಿದ್ದಿದೆ.
ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿ ನಡೆಸಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫಲಿತಾಂಶ ಪ್ರಕಟಿಸಿದ್ದಾರೆ.
ಇನ್ನೂ ಈ ಬಾರಿಯ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನವನ್ನು ಗಳಿಸಿದ್ದರೆ, ಬೆಂಗಳೂರು ಗ್ರಾಮಾಂತರ ದ್ವಿತೀಯ ಸ್ಥಾನವನ್ನು, ಮಧುಗಿರಿ ಮೂರನೇ ಸ್ಥಾನ , ಯಾದಗಿರಿ ಜಿಲ್ಲೆ ಕೊನೆಯ ಸ್ಥಾನವನ್ನು ಗಳಿಸಿದೆ ಎಂಬುದಾಗಿ ಸಚಿವರು ತಿಳಿಸಿದ್ದಾರೆ.
ನಮ್ಮ ರಾಜ್ಯದಲ್ಲಿ ಈ ಬಾರಿ 8,48,203 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ನೊಂದಣಿ ಮಾಡಿದ್ದರು. 19,816 ವಿದ್ಯಾರ್ಥಿಗಳು ಶಾಲಾ ಮಟ್ಟದಲ್ಲಿಯೇ ಹಾಜರಾತಿ ಕೊರತೆಯಿಂದ ಪರೀಕ್ಷೆಗೆ ಕೂರಲು ಅವಕಾಶ ನೀಡಿರಲಿಲ್ಲ. ಜೊತೆಗೆ ಕೊರೋನಾ ಕಾರಣದಿಂದ, ಕೊರೋನಾ ಆತಂಕದಿಂದ 18,067 ವಿದ್ಯಾರ್ಥಿಗಳು ಕುಳಿತಿರಲಿಲ್ಲ. ಹೀಗಾಗಿ ಒಟ್ಟು ಪರೀಕ್ಷೆಗೆ 8,11,050 ಹಾಜರಾಗಿದ್ದಾರೆ ಎಂದರು.
ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 5,82,316 ವಿದ್ಯಾರ್ಥಿಗಳು ಪಾಸ್ ಆಗಿದ್ದರೆ, 2,28,734 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ರಾಜ್ಯದ ಸರ್ಕಾರಿ ಶಾಲೆಗಳು ಈ ವರ್ಷ ಶೇ.72.79 ರಷ್ಟು ಫಲಿತಾಂಶ ನೀಡಿವೆ.
ಕಳೆದ ವರ್ಷ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಶೇ.73.70ರಷ್ಟು ಫಲಿತಾಂಶ ಬಂದಿತ್ತು. ಈ ವರ್ಷ ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಹೆದರಿ ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಆಗಮಿಸಿರಲಿಲ್ಲ. ಅಲ್ಲದೆ, ಕೆಲವು ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿದ್ದು ಚಿಕಿತ್ಸೆಗೆ ಒಳಗಾಗಿದ್ದಾರೆ. ಪರಿಣಾಮ ಈ ವರ್ಷದ ಫಲಿತಾಂಶ ಶೇ.71.80ರಷ್ಟು ಬಂದಿದೆ.
ಇನ್ನೂ ಎಂದಿನಂತೆ ಈ ವರ್ಷವೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯದಲ್ಲಿ ಶೇ.77.74 ರಷ್ಟು ವಿದ್ಯಾರ್ಥಿನಿಯರು ಪಾಸ್ ಆಗಿದ್ದರೆ, ಶೇ. 66.41 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
