ಬೆಂಗಳೂರು :
ಮಾರಕ ಕೊರೊನಾ ವೈರಸ್ ನಿಯಂತ್ರಿಸಲು ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ವಿರುದ್ಧ ಇನ್ಮುಂದೆ ದಾಳಿ ಮಾಡಿದರೆ, ಅಂತಹವರಿಗೆ 3 ವರ್ಷ ಜೈಲು ಹಾಗೂ ದಾಳಿಕೋರರ ಆಸ್ತಿ ಪಾಸ್ತಿ ಮುಟ್ಟುಗೋಲು ಹಾಕಲು ಸರ್ಕಾರ ಮುಂದಾಗಿದೆ.
ಈ ಕುರಿತಂತೆ ಮಹತ್ವದ ಸುಗ್ರೀವಾಜ್ಞೆಯನ್ನು ರಾಜ್ಯಸರ್ಕಾರ ರಾಜ್ಯಪಾಲರಿಗೆ ರವಾನಿಸಿದ್ದು, ಇಂದು ಸಂಜೆ ವೇಳೆಗೆ ಗವರ್ನರ್ ವಿ.ಆರ್.ವಾಲಾ ಅವರು ಅಂಕಿತ ಹಾಕಲಿದ್ದಾರೆ.
ಕಳೆದ ಭಾನುವಾರ ಪಾದರಾಯನಪುರದಲ್ಲಿ ಆರೋಗ್ಯ, ಪೊಲೀಸ್, ಬಿಬಿಎಂಪಿ ಸಿಬ್ಬಂದಿ ಮೇಲೆ ಹಲ್ಲೆ ನಡೆದಿತ್ತು. ಇದರ ಬೆನ್ನಲ್ಲೇ ನಿನ್ನೆ ಮೈಸೂರಿನಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ದೌರ್ಜನ್ಯ ನಡೆದಿತ್ತು. ಕಳೆದ ಕೆಲ ದಿನಗಳ ಹಿಂದೆ ಸುಲ್ತಾನ್ ಪಾಳ್ಯದಲ್ಲೂ ಆಶಾ ಕಾರ್ಯಕರ್ತೆಯರಿಗೆ ಧಮ್ಕಿ ಹಾಕಲಾಗಿತ್ತು. ಈ ಹಿನ್ನಲೆಯಲ್ಲಿ ದಾಳಿ ಕೋರರ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ವೈದ್ಯರು, ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದರೆ, ಅಂತಹ ದಾಳಿಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸರ್ಕಾರ ನಿರ್ಧರಿಸಿದೆ.
ಕೇರಳ ಮತ್ತು ಉತ್ತರ ಪ್ರದೇಶದಲ್ಲಿ ಈ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿತ್ತು. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವು ಕೂಡ ಈ ಕಾಯ್ದೆಯನ್ನು ಜಾರಿಗೊಳಿಸಲು ನಿರ್ಧರಿಸಿ ಇಂದು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ