ಬೆಳಗಾವಿ:
ಇತ್ತೀಚಿನ ಪ್ರವಾಹ ಹಾಗೂ ಧಾರಾಕಾರ ಮಳೆಯಿಂದಾಗಿ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಒಟ್ಟಾರೆ 454 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಸಚಿವರಾದ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ವಿವಿಧ ಬ್ಯಾರೇಜ್ಗಳು ಮತ್ತು ಏತ ನೀರಾವರಿ ಯೋಜನೆಯನ್ನು ಬುಧವಾರ ಪರಿಶೀಲಿಸಿ ಅವರು ಮಾತನಾಡಿದ ಅವರು, ಬೆಳಗಾವಿ, ಕಾರವಾರ, ಹಾವೇರಿ, ವಿಜಯಪುರ, ಕೊಪ್ಪಳದಲ್ಲಿ ಹಾನಿ ಪ್ರಮಾಣ ಜಾಸ್ತಿಯಾಗಿದೆ. ಸಂಪರ್ಕ ಕಡಿತಗೊಂಡಿರುವ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವುದಕ್ಕೆ ಇಲಾಖೆ ವತಿಯಿಂದ ಮೊದಲ ಆದ್ಯತೆ ನೀಡಲಾಗುತ್ತಿದೆ.
ಹಾನಿಗೊಳಗಾದ ಬ್ಯಾರೇಜ್ ಗಳಲ್ಲಿ ತಕ್ಷಣಕ್ಕೆ ನೀರು ನಿಲ್ಲಿಸಲಾಗುವುದು. ನಂತರ ಎತ್ತರ ಹೆಚ್ಚಿಸಲು, ರಸ್ತೆ, ಸೇತುವೆ ಮತ್ತಿತರ ಶಾಶ್ವತ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಕೇಂದ್ರದಿಂದ 11 ಕೋಟಿ ಪರಿಹಾರ ಸಾಧ್ಯ:
ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ 454 ಕೋಟಿ ರೂಪಾಯಿ ಹಾನಿಯಾಗಿದ್ದರೂ ಕೇಂದ್ರ ಸರ್ಕಾರದಿಂದ ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಕೇವಲ 11 ಕೋಟಿ ರೂಪಾಯಿ ಮಾತ್ರ ಪರಿಹಾರ ಲಭಿಸುವುದು ಸಾಧ್ಯವಾಗಲಿದೆ.
ಆದ್ದರಿಂದ ದುರಸ್ತಿ ಹಾಗೂ ಪುನರ್ ನಿರ್ಮಾಣ ಕಾಮಗಾರಿಗಳನ್ನು ರಾಜ್ಯ ಸರ್ಕಾರದಿಂದಲೇ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಸಚಿವ ಜೆ ಸಿ ಮಾಧುಸ್ವಾಮಿ ವಿವರಿಸಿದರು.
ಸದ್ಯಕ್ಕೆ 5 ಲಕ್ಷಕ್ಕಿಂತ ಕಡಿಮೆ ಅನುದಾನದಲ್ಲಿ ಕೈಗೊಳ್ಳಬಹುದಾದ ಕೆಲಸಗಳನ್ನು ಕೂಡಲೇ ಆರಂಭಿಸಲಾಗುವುದು. ಅದಕ್ಕಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಸಬೇಕಿರುವುದರಿಂದ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದು ಅವರು ವಿವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ