ಚಾಮರಾಜನಗರ :
ದರೋಡೆಯಾದ 50 ಲಕ್ಷ ರೂಪಾಯಿ ಮೌಲ್ಯದ ಪಾನ್ ಮಸಾಲಾವನ್ನು ಕಳ್ಳತನದ ದೂರು ಸ್ವೀಕರಿಸಿದ 12 ಗಂಟೆಗಳ ಒಳಗೇ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರದ(ನ.23) ಮುಂಜಾನೆ ಚಾಮರಾಜನಗರ ಜಿಲ್ಲೆ ಗಡಿಭಾಗದಲ್ಲಿರುವ ಕೋಳಿಪಾಳ್ಯ ಗ್ರಾಮದಲ್ಲಿ ರಾಜಸ್ಥಾನ ಮೂಲದ ಬವರಲಾಲ್ ಎಂಬುವರಿಗೆ ಸೇರಿದ ಗೋದಾಮಗಳ ಬಾಗಿಲು ಮುರಿದು ಸಿಬ್ಬಂದಿಯನ್ನು ಬೆದರಿಸಿ 12 ಮಂದಿ ಇದ್ದ ತಂಡವೊಂದು 50 ಲಕ್ಷ ರೂಪಾಯಿ ಮೌಲ್ಯದ ಪಾನ್ ಮಸಲಾವನ್ನು ದೋಚಿತ್ತು.
ಘಟನೆಯ ವಿವರ :
ಕೋಳಿಪಾಳ್ಯ ಗ್ರಾಮದಲ್ಲಿ ಬವರಲಾಲ್ ಅವರು ಮಹಾವೀರ್ ಮಾರ್ಕೆಟಿಂಗ್ ಪಾನ್ ಮಸಾಲ ದಾಸ್ತಾನು ಮಳಿಗೆಯನ್ನು ಹೊಂದಿದ್ದು ವಿವಿಧ ಕಂಪನಿಗಳ ಪಾನ್ ಮಸಾಲ ಹಾಗು ಟೊಬ್ಯಾಕೋ ಪ್ಯಾಕೆಟ್ ಗಳನ್ನು ಬೆಂಗಳೂರಿನಲ್ಲಿ ಖರೀದಿಸಿ ಇಲ್ಲಿ ದಾಸ್ತಾನು ಮಾಡಿ ಚಾಮರಾಜನಗರ ಜಿಲ್ಲೆಯಲ್ಲಿ ವಿತರಣೆ ಮಾಡುವ ವ್ಯಾಪಾರ ಮಾಡುತ್ತಿದ್ದರು. ಈ ವಿಷಯ ಅರಿತಿದ್ದ ದುಷ್ಕರ್ಮಿಗಳು ನಿನ್ನೆ ರಾತ್ರಿ ಈ ಗೋದಾಮಿನ ಬಾಗಿಲು ಮುರಿದು ಪಾನ್ ಮಸಾಲ ಚೀಲಗಳನ್ನು ಗೂಡ್ಸ್ ವಾಹನಗಳಿಗೆ ತುಂಬುತ್ತಿದ್ದರು. ಅದೇ ವೇಳೆಗೆ ಬೆಂಗಳೂರಿನಿಂದ ಲಾರಿಯಲ್ಲಿ ಮಾಲು ತುಂಬಿಕೊಂಡು ಗೋದಾಮಿಗೆ ಬಂದ ಬವರ ಲಾಲ್ ಅವರ ಚಾಲಕ ರಮೇಶ್ ಇದನ್ನು ನೋಡಿ ಗಾಬರಿಗೊಂಡು ಪ್ರಶ್ನಿಸಿದ್ದಾರೆ. ನಾವು ಪೊಲೀಸರು ಎಂದ ದುಷ್ಕರ್ಮಿಗಳು ಚಾಲಕ ರಮೇಶ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಹೊರಬಂದ ಆತ ತನ್ನ ಮಾಲೀಕ ಬವರಲಾಲ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ತಕ್ಷಣ ಸ್ಞಳಕ್ಕೆ ಧಾವಿಸಿದ ಬವರಲಾಲ್ ಪೂರ್ವ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಪ್ರಕರಣದ ಬೆನ್ನು ಹತ್ತಿದ ಪೊಲೀಸರ ತಂಡ ಪಾನ್ ಮಸಾಲ ಸಾಗಿಸುತ್ತಿದ್ದ ಮೂರು ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ತಮಿಳುನಾಡು ತಿರುಪೂರು ಜಿಲ್ಲೆ ಧರ್ಮಪುರಿ ತಾಲೋಕಿನ ಅಬುತಲ್ಲಾ ಎಂಬಾತ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಉಳಿದ 11 ಮಂದಿ ಪರಾರಿಯಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
