ಮಾರ್ಕೋನಹಳ್ಳಿ ನಾಲೆ ಅಭಿವೃದ್ಧಿಗೆ 66 ಕೋಟಿ ರೂ : ಡಿ.ಕೆ.ಶಿ

ಕುಣಿಗಲ್ :

      ರಾಜ್ಯದ ಪ್ರಸಿದ್ದ ಡ್ಯಾಂಗಳಲ್ಲಿ ಒಂದಾದ ಮಾರ್ಕೋನಹಳ್ಳಿ ಜಲಾಶಯವನ್ನು ವೀಕ್ಷಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ 66 ಕೋಟಿ ವೆಚ್ಚದ ನಾಲೆ ಅಭಿವೃದ್ದಿಗೆ ಚಾಲನೆ ನೀಡಿ ಕುಣಿಗಲ್ ಕ್ಷೇತ್ರವನ್ನು ಹುಚ್ಚಮಾಸ್ತಿಗೌಡರ ಹಾಗೂ ವೈಕೆಆರ್ ಅವರ ಮಾದರಿಯಲ್ಲಿ ಸಂಪೂರ್ಣ ಅಭಿವೃದ್ದಿಗೆ ಒತ್ತು ನೀಡುತ್ತೇನೆ ಎಂದು ಭರವಸೆ ನೀಡಿದರು.

      ಶನಿವಾರ ಮಧ್ಯಾಹ್ನ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯ ವೀಕ್ಷಿಸುವುದಾಗಿ ಸದನದಲ್ಲಿ ಹೇಳಿಕೆ ನೀಡಿದ್ದರ ಹಿನ್ನೆಲೆಯಲ್ಲಿ ಆಗಮಿಸಿದ ಅವರು ಜಲಾಶಯದ ಎಡದಂಡೆ ನಾಲೆಯ ಅಭಿವೃದ್ದಿಗೆ 66 ಕೋಟಿ ವೆಚ್ಚ ಭರಿಸಲಾಗಿದ್ದು ಈ ಭಾಗದ 14683 ಎಕ್ಟೇರ್ ಭೂಮಿಯ ಅಚ್ಚುಕಟ್ಟು ಪ್ರದೇಶಕ್ಕೆ ಸಮಗ್ರ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

      ತುಮಕೂರು ಜಿಲ್ಲೆಗೆ 30 ವರ್ಷದಿಂದ ಹೇಮಾವತಿ ಸಮರ್ಪಕವಾಗಿ ಹರಿದಿಲ್ಲ. ಇತ್ತೀಚೆಗೆ ಜಿಲ್ಲೆಯ 9 ತಾಲ್ಲೂಕಿಗೆ ಹಿಂದೆ ನಿಗದಿಯಾಗಿದ್ದ 25 ಟಿ.ಎಂ.ಸಿ. ನೀರಿನಲ್ಲಿಯೇ ಹಂಚಿಕೆಯಾಗುತ್ತಿದೆ. ಅಲ್ಲದೆ ಗೊರೂರಿನಿಂದ ಬರುವ ಹೇಮಾವತಿಗೆ ಅಲ್ಲಲ್ಲಿ ರೈತರು ನಾಲೆಗೆ ಪಂಪ್ ಸೆಟ್ ಬಿಟ್ಟುಕೊಂಡು 100 ಹೆಚ್.ಬಿ.ಗಿಂತ ಹೆಚ್ಚು ನೀರು ಪಡೆಯುವುದರಿಂದಲೂ ಈ ಭಾಗಕ್ಕೆ ನೀರು ಬರಲು ಅಡ್ಡಿಯಾಗಿದೆ. ಆದರೆ ಜಿ.ಎಸ್. ಬಸವರಾಜು ಅವರು ತುಮಕೂರು ಜಿಲ್ಲೆಯ ನೀರನ್ನು ಡಿಕೆಶಿ ಕಡೆಯವರು ರಾಮನಗರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆಂದೆಲ್ಲ ಸುಳ್ಳು ಆರೋಪ ಮಾಡಿದ್ದಾರೆ. ಅವರಿಗೆ ಇಲ್ಲಿ ನೀರು ಪೋಲಾಗುತ್ತಿರುವುದು ತಿಳಿದಿಲ್ಲ. ಈ ಫೋಟೋ ಸಹಿತ ತೋರಿಸುತ್ತೇನೆ ಎಂದು ವ್ಯಂಗ್ಯವಾಡಿದರು.

      146ಕೆ.ಎಂ.ನ ಮಲ್ಲಹಳ್ಳಿಯ ಬಳಿ ನಾಲೆ ಮಣ್ಣು ಗಿಡಗಂಟೆ ಕಸ ತುಂಬಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ ಎಂಬುದನ್ನ ಖುದ್ದು ವೀಕ್ಷಿಸಿದ್ದೇನೆ. ಈ ಬಗ್ಗೆ ಮುಂದೆ ಕ್ರಮ ಕೈಗೊಳ್ಳುತ್ತೇನೆ. ಮುಂದೆ ಈ ಭಾಗಕ್ಕೆ ಸಮರ್ಪಕವಾಗಿ ನೀರುಹರಿಸಲು ಎಕ್ಸ್‍ಪ್ರೆಸ್ ಚಾನಲ್ ಮಾಡಲು 470 ಕೋಟಿ ಖರ್ಚು ಮಾಡಿ ಸಂಪೂರ್ಣ ಹೇಮಾವತಿ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದೆಂದರು. ಈ ಭಾಗದ ರೈತರ ಬೇಡಿಕೆಯಂತೆ ಮಾರ್ಕೋನಹಳ್ಳಿ – ಮಂಗಳ ಜಲಾಶಯಗಳ ನಡುವೆ ಲಿಂಕ್ ಚಾನೆಲ್ ಮಾಡಿ ತಾಲ್ಲೂಕಿನ ರೈತರ ಸಂಪೂರ್ಣ ಅಭಿವೃದ್ದಿಗೆ ನೆರವಾಗುತ್ತೇನೆ. ಆದರೆ ನಾನು ಈಗ ಮಾತನಾಡುವುದಿಲ್ಲ. ನಿಮ್ಮ ಋಣ ನಮ್ಮ ಮೇಲಿದೆ. ಹಿಂದೆ ಡಿ.ಕೆ. ಸುರೇಶ್‍ರನ್ನು ಸಂಸದರನ್ನಾಗಿ ಮಾಡಿದ್ದೀರಿ. ಇದೀಗ ಮತ್ತೆ ಲೋಕಸಭಾ ಚುನಾವಣೆ ಮರುಕಳಿಸಿದ್ದು ಜೆಡಿಎಸ್ ಕುಮಾರಣ್ಣ ಕಾಂಗ್ರೆಸ್‍ನಲ್ಲಿ ನಾವು ಒಂದಾಗಿ ಸರ್ಕಾರ ಮಾಡುತ್ತಿದ್ದೇವೆ. ಯಾವುದೇ ಸಮಸ್ಯೆಗಳು ಉಂಟಾಗದಂತೆ ನಾವು ಜಾತಿ ಭೇದ ಮರೆತು ಜನಪರ ಕೆಲಸ ಮಾಡುತ್ತೇವೆ. ರೈತರಿಗೆ ಮೊದಲ ಆದ್ಯತೆ. ರೈತರಿಗೆ ಸಂಬಳ, ಬಡ್ತಿ, ಲಂಚ ಯಾವುದು ಸಿಗದು. ಅವರಿಗೆ ಬೇಕಾಗಿರುವುದು ನೀರು,.ವಿದ್ಯುತ್. ಅದನ್ನು ನಾವು ನೀಡುತ್ತೇವೆ. ನಮಗೆ ಮತ್ತಷ್ಟು ಶಕ್ತಿ ತುಂಬಿ ಎಂದು ಚುನಾವಣೆಯ ಪ್ರಚಾರ ಮಾದರಿಯಲ್ಲಿ ಮತ ಯಾಚನೆಯನ್ನು ಸಹ ಮಾಡಿದರು.

      ನಾನು ಇಂಧನ ಖಾತೆ ಸಚಿವನಾಗಿ ತಾಲ್ಲೂಕಿನ ರೈತರ ಅಭಿವೃದ್ದಿಗೆ 330 ಕೋಟಿ ವೆಚ್ಚದಲ್ಲಿ ಹೆಚ್.ವಿ.ಡಿ.ಎಸ್ ಯೋಜನೆಯಲ್ಲಿ ಟ್ರಾನ್ಸ್‍ಫಾರ್ಮರ್‍ಗಳನ್ನು ನೀಡಿದ್ದು ನೂತನ ಡಿವಿಜನ್ ಆಫೀಸ್ ಹಾಗೂ ಸೋಲಾರ್ ಪ್ಲಾಂಟ್‍ಗಳನ್ನು ಸ್ಥಾಪಿಸುವ ಮೂಲಕ ಡಾ.ರಂಗನಾಥ್ ಅವರನ್ನು ಗೆಲ್ಲಿಸಿ ಎಂದು ಕೇಳಿಕೊಂಡೆ. ಅದರಂತೆ ನೀವು ಎಂ.ಎಲ್.ಎ. ಮಾಡಿದ್ದೀರಿ. ಅದಕ್ಕೆ ಮುಂದೆ ನಾನು ಹೇಳುವುದಿಲ್ಲ, ಮಾಡಿ ತೋರಿಸುತ್ತೇನೆ ಎಂದು ರೈತರಿಗೆ ಭರವಸೆ ನೀಡಿದರು.

      ಶಾಸಕ ಡಾ.ರಂಗನಾಥ್ ಮಾತನಾಡಿ, ಈ ಭಾಗಕ್ಕೆ 25 ವರ್ಷದಿಂದ ನೀರು ಹರಿಯದೇ ಅನ್ಯಾಯವಾಗಿದೆ. ಆ ಹಿನ್ನೆಲೆಯಲ್ಲಿ ನಾವು ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ ಅವರ ಬಳಿ ಸಂಪೂರ್ಣ ಸಮಸ್ಯೆಯ ಮಾಹಿತಿ ನೀಡಿದ್ದು, ಅದನ್ನು ಪರಿಹರಿಸಲು ಶತಾಯಗತಾಯ ಸಮರ್ಪಕ ನೀರು ಹರಿಯುವ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಭರವಸೆ ನೀಡಿ ಬಂದಿದ್ದಾರೆ. ಅವರಿಗೆ ನಾನು ಋಣಿಯಾಗಿದ್ದೇನೆ. ಅವರು ಇಂಧನ ಸಚಿವರಾಗಿದ್ದಾಗ ಈ ಕ್ಷೇತ್ರಕ್ಕೆ ಸಾವಿರಾರು ಕೋಟಿ ವೆಚ್ಚದಲ್ಲಿ ಹಲವು ಯೋಜನೆ ಹಾಗೂ ಕಾಮಗಾರಿಗಳನ್ನು ಮಾಡಿದ್ದಾರೆ. ಮುಂದೆಯೂ ಈ ಕ್ಷೇತ್ರದ ಜನರ ಸಮಸ್ಯೆಗೆ ನಿತ್ಯ ದುಡಿಯುತ್ತೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

      ಜಿಲ್ಲಾ ಪಂಚಾಯಿತಿ ಸದಸ್ಯೆ ಅನುಸೂಯಮ್ಮ, ಹೇಮಾವತಿ ನೀರಾವರಿ ಇಲಾಖೆಯ ಅಧಿಕಾರಿಗಳು, ತಹಸೀಲ್ದಾರ್ ನಾಗರಾಜ್, ಇ.ಒ. ಶಿವರಾಜಯ್ಯ, ಮುಖಂಡರಾದ ಐ.ಎ.ವಿಶ್ವನಾಥ್, ಅನಿಲ್, ಗಾಯತ್ರಿರಾಜು, ಕೆಂಪೀರೆಗೌಡ, ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಆಲ್ಕೆರೆ ನಾರಾಯಣ್, ಬೇಗೂರು ನಾರಾಯಣ್, ಅಲ್ಲಾಬಕಾಶ್, ಐ.ಜಿ.ರಮೇಶ್, ರವೀಂದ್ರಕುಮಾರ್, ಗ್ಯಾಸ್ ನರಸಿಂಹಮೂರ್ತಿ, ರೈತ ಮರಿಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link