ಚಾಮರಾಜನಗರ:
ಕಳೆದ ನಾಲ್ಕು ದಿನಗಳಿಂದ ವ್ಯಾಪಿಸಿರುವ ಬೆಂಕಿಯ ಕೆನ್ನಾಲಗೆಗೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ 3500 ಹೆಕ್ಟೇರ್ ಅರಣ್ಯ ಸುಟ್ಟು ಕರಕಲಾಗಿದೆ. ಅಪರೂಪದ ಜೀವ ಪ್ರಭೇದಗಳ ಆವಾಸಸ್ಥಾನವಾಗಿರುವ ಗೋಪಾಲಸ್ವಾಮಿ ಬೆಟ್ಟ ವಲಯವಂತೂ ಸ್ಮಶಾನದಂತಾಗಿದೆ.
ಬೆಂಕಿಯ ಜ್ವಾಲೆಗೆ ಹೆದರಿದ ಬಂಡೀಪುರದ ವನ್ಯ ಜೀವಿಗಳು ಇದೀಗ ಕಾಡು ತೊರೆದು ಪ್ರಾಣ ಉಳಿಸಿಕೊಳ್ಳುವತ್ತ ಮುಖಮಾಡಿವೆ. ಪ್ರಸ್ತುತ ಬಂಡೀಪುರದಲ್ಲಿ ಶುಕ್ರವಾರ ಕಾಣಿಸಿಕೊಂಡ ಕಾಡ್ಗಿಚ್ಚು, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಲಕ್ಕಿ ಗುಡ್ಡ, ಬೋಳಗುಡ್ಡ ಹೀಗೆ ಹಲವಾರು ಕಡೆ ವ್ಯಾಪ್ತಿಸಿಕೊಂಡು ಇಡೀ ಕಾಡನ್ನೇ ಬರಿದಾಗಿಸುತ್ತಿದೆ.
ಈ ಭಾಗದಲ್ಲಿ ಹೆಚ್ಚಾಗಿ ಕಂಡುಬರುವ ಹುಲಿ, ಆನೆ, ಕರಡಿ, ಜಿಂಕೆ, ಕಾಡೆಮ್ಮೆ ಮತ್ತು ನವಿಲು, ತೋಳಗಳು ಸೇರಿ ಬಹುತೇಕ ಪ್ರಾಣಿಗಳು ದಿಕ್ಕಾಪಾಲಾಗಿ ಓಡಿಹೋಗಿವೆ. ಉಳಿದ ಪ್ರಾಣಿಗಳು ಈಗಾಗಲೇ ಬೆಂಕಿಯ ಪ್ರತಾಪ ಕಂಡು ಕಾಲ್ಕಿತ್ತಿವೆ. ದಿಕ್ಕಾಪಾಲಾಗಿ ಓಡುವ ವೇಳೆ ನಾಲ್ಕೂ ಕಡೆಗಳಿಂದ ಸುತ್ತುವರಿದ ಬೆಂಕಿಯ ಕೆನ್ನಾಲಿಗೆಗೆ ಮೊಲ, ಹಕ್ಕಿಗಳು, ಸರೀ ಸೃಪಗಳು ಜೀವಂತ ಶವವಾಗಿವೆ.
ದಟ್ಟಹೊಗೆ, ಬೆಂಕಿಯ ತಾಪಕ್ಕೆ ಸುತ್ತಲೂ ಆವರಿಸಿಕೊಂಡ ಬೆಂಕಿಯಿಂದಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗದ ಸಣ್ಣಪುಟ್ಟ ಪ್ರಾಣಿಗಳು, ಸರೀಸೃಪಗಳು ಸುಟ್ಟುಕರಕಲಾದ ಹೃದಯ ಕಲಕುವ ದೃಶ್ಯ ಅಲ್ಲಲ್ಲಿ ಕಣ್ಣಿಗೆ ಬೀಳುತ್ತವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ