ಬೆಂಗಳೂರು :
ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಬೆಳ್ಳಂಬೆಳಗ್ಗೆ ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಅವರ ಮನೆ, ಫ್ಲ್ಯಾಟ್, ಕಚೇರಿ ಸೇರಿ ಏಕ ಕಾಲದಲ್ಲಿ 6 ಕಡೆ ಎಸಿಬಿ ದಾಳಿ ನಡೆಸಿದೆ.
ಈ ಹಿಂದೆ ಭೂಸ್ವಾಧೀನಾಧಿಕಾರಿಯಾಗಿದ್ದ ಡಾ.ಸುಧಾ ಅವರ ಮೇಲೆ ಅಕ್ರಮ ಆಸ್ತಿ ಗಳಿಕೆ, ಅವ್ಯವಹಾರ ಆರೋಪ ಕೇಳಿಬಂದಿತ್ತು. ಜೊತೆಗೆ ಡಾ.ಬಿ.ಸುಧಾ ಪರಿಚಯಸ್ಥರ ಮನೆಗಳ ಮೇಲೂ ದಾಳಿ ನಡೆಸಲಾಗಿದ್ದು, ಬೆಂಗಳೂರಿನ ಓರ್ವ ಹಾಗೂ ಮೈಸೂರು, ಉಡುಪಿಯ ಓರ್ವರ ಮನೆ ಮೇಲೂ ದಾಳಿ ನಡೆದಿದೆ.
ಬೆಂಗಳೂರಿನ ಕೊಡಿಗೇಹಳ್ಳಿ ನಿವಾಸ, ಯಲಹಂಕದಲ್ಲಿರುವ ಫ್ಯ್ಲಾಟ್, ಬ್ಯಾಟರಾಯನಪುರ ಮನೆ, ಬಿಇಎಂಎಲ್ ನಲ್ಲಿರುವ ಮನೆ ಹಾಗೂ ಶಾಂತಿ ನಗರದಲ್ಲಿರುವ ಕಚೇರಿ ಸೇರಿ ಉಡುಪಿ ಜಿಲ್ಲೆಯ ಹೆಬ್ರಿಯ ತಂಕಬಟ್ಟಿನ ಮನೆ ಸೇರಿ ಏಕಕಾಲದಲ್ಲಿ 6 ಕಡೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ಮಾಡುತ್ತಿದ್ದಾರೆ.
ದಾಳಿಯ ವೇಳೆ ಡಾ.ಬಿ.ಸುಧಾ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳು ಪತ್ತೆಯಾದ ಚಿನ್ನಾಭರಣ ಒಂದೆಡೆ ಸೇರಿಸಿ ಈ ಬಗ್ಗೆ ಸುಧಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಡಾ. ಬಿ. ಸುಧಾ ಅವರು ಸದ್ಯ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ