ಬೆಂಗಳೂರು:
ವಿಧಾನಸೌಧದಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ವಿಧಾನಸೌಧದಲ್ಲಿ ನಡೆಯಲಿರುವ ಪೊಲೀಸ್ ವಸತಿಗೃಹಗಳ ನಿರ್ಮಾಣ-2025 ಯೋಜನೆಯ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ವಿಧಾನಸೌಧದ ಸಚಿವಾಲಯದ ಸಿಬ್ಬಂದಿಗೆ ಇಂದು ಅರ್ಧ ದಿನ ರಜೆ ಘೋಷಿಸಿದ ಕಾರಣ, ಸಿಬ್ಬಂದಿ ಹಾಗೂ ಅಧಿಕಾರಿಗಳು ವಿಧಾನಸೌಧದಿಂದ ತೆರಳಿದ ನಂತರ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ವಿಧಾನಸೌಧ ಹಾಗೂ ವಿಕಾಸಸೌಧದ ಎಲ್ಲ ಕಚೇರಿಗಳು ಬಂದ್ ಆಗಿವೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನೇತೃತ್ವದಲ್ಲಿ ಭಾರಿ ಬಂದೋಬಸ್ತ್ ಕೈಗೊಂಡಿರುವ ಪೊಲೀಸ್ ಅಧಿಕಾರಿಗಳು ವಾಹನದಲ್ಲಿ ಆಗಾಗ ಗಸ್ತು ತಿರುಗುತ್ತಿದ್ದಾರೆ.
ನಗರದ ಎಲ್ಲ ವಿಭಾಗಗಳಿಂದ ಸಿವಿಲ್ ಪೊಲೀಸರು, ಗೃಹ ರಕ್ಷಕದಳ, ಕೆಎಸ್ಆರ್ಪಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹಲವು ಹಿರಿಯ ಅಧಿಕಾರಿಗಳ ಮುಖಂಡತ್ವದಲ್ಲಿ ತಂಡಗಳನ್ನು ರಚಿಸಲಾಗಿದ್ದು, ವಿಧಾನಸೌಧ ಹಾಗೂ ವಿಕಾಸಸೌಧದ ಎಲ್ಲ ಗೇಟ್ಗಳಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ವಿಧಾನಸೌಧ ಮುಂಭಾಗದ ಅಂಬೇಡ್ಕರ್ ವೀದಿಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಕಾರ್ಯಕ್ರಮಕ್ಕೆ ಗಣ್ಯರು ಆಗಮಿಸುವ ಹಿನ್ನೆಲೆಯಲ್ಲಿ ಬ್ಯಾಂಕ್ವೆಟ್ ಹಾಲ್ ಮತ್ತು ವಿಧಾನಸೌಧದ ಮೆಟ್ಟಿಲುಗಳನ್ನು ಅಲಂಕರಿಸಲಾಗಿದೆ. ವಿಧಾನಸೌಧದ ಬಾಂಕ್ವೆಟ್‍ಹಾಲ್ ಮತ್ತಿತರ ಕಡೆಗಳಲ್ಲಿ ಸ್ಯಾನಿಟೈಸ್ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ