ಅಮ್ರೋಹಾ:
ಅಪಘಾತದಿಂದಾಗಿ ರಸ್ತೆಯಲ್ಲಿ ಸತ್ತು ಬಿದ್ದ ವ್ಯಕ್ತಿಯ ದೇಹದ ಮೇಲೆ ನೂರಾರು ವಾಹನಗಳು ಹರಿದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಶನಿವಾರದಂದು(ಫೆ.22) ದೆಹಲಿ-ಲಖನೌ ಹೆದ್ದಾರಿಯನ್ನು ದಾಟುತ್ತಿದ್ದ ಪಾದಚಾರಿಯೊಬ್ಬನಿಗೆ ವೇಗದಿಂದ ಬಂದಿರುವ ಕಾರು ಡಿಕ್ಕಿ ಹೊಡೆದಿದೆ. ಪಾದಚಾರಿಗೆ ಹೊಡೆದ ಕಾರು ನಿಲ್ಲಿಸದೆ ಹಾಗೇ ಮುಂದೆ ಹೋಗಿದೆ. ವ್ಯಕ್ತಿಯೊಬ್ಬ ಅಪಘಾತದಲ್ಲಿ ಸಾವನ್ನಪ್ಪಿ ಸುಮಾರು 11-12 ತಾಸುಗಳು ಕಳೆದಿತ್ತು. ಆದರೂ ಯಾರ ಕಣ್ಣಿಗೂ ವ್ಯಕ್ತಿಯ ಮೃತದೇಹ ಕಾಣಿಸಿಯೇ ಇರಲಿಲ್ಲ. ನೂರಾರು ವಾಹನಗಳು ಹೆಣದ ಮೇಲೆ ಹರಿದ ಪರಿಣಾಮ ದೇಹ ಛಿದ್ರಛಿದ್ರವಾಗಿತ್ತು. ಸುತ್ತ ಮುತ್ತದ ಪ್ರದೇಶದಲ್ಲಿ ಹಲವು ಪೊಲೀಸ್ ಗಾಡಿಗಳು ಓಡಾಡಿವೆಯಾದರೂ, ಪೊಲೀಸರಿಗೂ ಸಹ ಅಪಘಾತವಾಗಿರುವುದು ತಿಳಿಯದ ಕಾರಣ ಸತತ 12 ಗಂಟೆಗಳ ಕಾಲ ಮೃತ ದೇಹವು ರಸ್ತೆಯಲ್ಲಿ ವಾಹನಗಳ ಅಡಿಯಲ್ಲಿ ಸಿಲುಕಿದೆ.
ಭಾನುವಾರ ಬೆಳಗ್ಗೆ ರಸ್ತೆಯಲ್ಲಿ ಮೃತ ದೇಹವಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಅಲ್ಲಿ ಉಳಿದಿದ್ದ ಶವವನ್ನು ಪೊಲೀಸರು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇನ್ನು ಮೃತ ದೇಹ ಎಷ್ಟರ ಮಟ್ಟಿಗೆ ಜಜ್ಜಿಹೋಗಿತ್ತೆಂದರೆ ಅದು ಹೆಣ್ಣಿನ ದೇಹವೋ ಅಥವಾ ಗಂಡಿನ ದೇಹವೋ ಎನ್ನುವುದೂ ಸಹ ಮರಣೋತ್ತರ ಪರೀಕ್ಷೆಯಿಂದಲೇ ತಿಳಿದುಕೊಳ್ಳಬೇಕಾಯಿತು ಎಂದು ಪೊಲೀಸರು ತಿಳಿಸಿದ್ದು, ಮೃತ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ವಿಚಾರಣೆಗೆ ಅನುಕೂಲವಾಗಲಿ ಎಂದು ಮೃತ ವ್ಯಕ್ತಿಯ ಡಿಎನ್ಎ ಶೇಖರಿಸಿಟ್ಟುಕೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ