ಬೆಂಗಳೂರು:
ಕೇಂದ್ರ ಸಚಿವ ಹೆಚ್.ಎನ್. ಅನಂತಕುಮಾರ್ ಹಿಂದು ಸ್ಮಾರ್ಥ ಬ್ರಾಹ್ಮಣ ಪಂಗಡಕ್ಕೆ ಸೇರಿರುವ ಕೇಂದ್ರ ಸಚಿವರ ಶವ ಸಂಸ್ಕಾರ ನಡೆದಿದೆ. ಸ್ಮಾರ್ಥ ಪದ್ಧತಿಯನುಸಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿದ್ದು, ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಅನಂತಕುಮಾರ್ ಅವರ ಪಾರ್ಥಿವ ಶರೀರಕ್ಕೆ ಸಹೋದರ ನಂದಕುಮಾರ್ ಅವರು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಗ್ನಿಸ್ಪರ್ಶ ಮಾಡಿದರು. ಇದಕ್ಕೂ ಮೊದಲು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಬಿಜೆಪಿ ರಾಷ್ಟ್ರ ನಾಯಕರು ಸೇರಿ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಅಂತ್ಯಸಂಸ್ಕಾರ ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಮಂಗಳವಾರ ಮಧ್ಯಾಹ್ನ ನೆರವೇರಿತು. ವೈದಿಕ ಸಂಪ್ರದಾಯದ ಪ್ರಕಾರ ಸೂರ್ಯಾಸ್ತಕ್ಕೂ ಮುನ್ನ ಅಂತ್ಯಸಂಸ್ಕಾರದ ಎಲ್ಲಾ ಪ್ರಕ್ರಿಯೆ ಪೂರ್ಣವಾಗಬೇಕು. ಹೀಗಾಗಿ ಮಧ್ಯಾಹ್ನವೇ ಸಹೋದರ ನಂದಕುಮಾರ್ ಅವರು ಅಂತಿಮ ವಿಧಿ ವಿಧಾನ ನೆರವೇರಿಸಿದರು. ಇತ್ತ ಭಾರತೀಯ ಸೇನೆಯು ಕುಶಾಲುತೋಪು ಸಿಡಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಿತು.
ಭಾನುಪ್ರಕಾಶ್ ಶರ್ಮ, ಪ್ರಸನ್ನ ಕುಮಾರ್, ಸುಶಾಂತ್ ಶರ್ಮ, ವೆಂಕಟ ಚಲಪತಿ ಶಾಸ್ತ್ರಿಗಳು ವಿಧಿವಿಧಾನ ಮಾಡಿದರು. ಈ ವೇಳೆ ಆತ್ಮಕ್ಕೆ ಶಾಂತಿ ಸಿಗಲೆಂದು ಶಾಂತಿ ಮಂತ್ರ ಪಠಣ ಮಾಡಲಾಯಿತು. ಮಕ್ಕಳ ಪರವಾಗಿ ಸಹೋದರ ನಂದಕುಮಾರ್ ವಿಧಿವಿಧಾನ ನೆರವೇರಿಸಿದರು. ಅನಂತ್‍ಕುಮಾರ್ ವಿಧಿವಶರಾಗಿ ಇಂದಿಗೆ 3 ದಿನಗಳು ಕಳೆದಿದ್ದು, ಪ್ರಾಯಶ್ಚಿತ ಮಾಡಲಾಗುತ್ತಿದೆ ಎಂದು ಪುರೋಹಿತ ಶ್ರೀನಾಥ್ ತಿಳಿಸಿದ್ದಾರೆ.
ಅಂತ್ಯ ಸಂಸ್ಕಾರದಲ್ಲಿ ಅನಂತ ಕುಮಾರ್ ಪತ್ನಿ ತೇಜಶ್ವಿನಿ ಅನಂತ ಕುಮಾರ್, ಪುತ್ರಿ ವಿಜೇತ ಹಾಗೂ ಕುಟುಂಬ ಸದಸ್ಯರು ಹಾಜರಿದ್ದರು. ಅನಂತಕುಮಾರ್ ಅವರ ಅಂತ್ಯಸಂಸ್ಕಾರಕ್ಕೆ ಗಣ್ಯರ ದಂಡೇ ಹರಿದು ಬಂದಿತ್ತು.
ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ, ಸದಾ ಹಸನ್ಮುಖಿಯಾಗಿ, ಸ್ನೇಹಜೀವಿಯಾಗಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ವಿಧಿವಶರಾಗಿದ್ದಾರೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳುವುದು ಕಷ್ಟವೇ..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ