ಅನಂತಕುಮಾರ್ ಒಬ್ಬ ಸ್ನೇಹಜೀವಿ: ಆರ್ ವಿ ದೇಶಪಾಂಡೆ

ಬೆಂಗಳೂರು

       ಕೇಂದ್ರ ಸಂಸದೀಯ ವ್ಯವಹಾರ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಅವರ ನಿಧನಕ್ಕೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್. ವಿ. ದೇಶಪಾಂಡೆ ರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

       “ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಆರಿಸಿ ಬರುತ್ತಿದ್ದ ಅನಂತಕುಮಾರ್ ಅವರು ಸ್ನೇಹಜೀವಿಯಾಗಿದ್ದರು. ಪಕ್ಷಾತೀತವಾದ ವರ್ಚಸ್ಸನ್ನು ಬೆಳೆಸಿಕೊಂಡಿದ್ದ ಅವರ ಅಕಾಲಿಕ ನಿಧನದಿಂದ ನಾಡು ಒಬ್ಬ ಸಮರ್ಥ ನೇತಾರನನ್ನು ಕಳೆದುಕೊಂಡಿದೆ,” ಎಂದು ದೇಶಪಾಂಡೆ ಕಂಬನಿ ಮಿಡಿದಿದ್ದಾರೆ.

       “ಕೇಂದ್ರ ಸಚಿವರಾಗಿ ಮತ್ತು ಸಂಸತ್ ಸದಸ್ಯರಾಗಿ ಉತ್ತಮ ಸಂಸದೀಯ ಪಟುವಾಗಿದ್ದ ಅನಂತಕುಮಾರ್, ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಕೆಲಸ-ಕಾರ್ಯಗಳಿಗೆ ಸದಾ ನೆರವಿನ ಹಸ್ತ ಚಾಚುತ್ತಿದ್ದರು. ಈಗ ಅವರನ್ನು ಕಳೆದುಕೊಂಡಿರುವುದು ನಾಡಿಗೆ ಆದ ನಷ್ಟವಾಗಿದೆ,” ಎಂದು ಸಚಿವರು ದುಃಖಿಸಿದ್ದಾರೆ.

        “ಚಿಕ್ಕ ವಯಸ್ಸಿನಲ್ಲೇ ಸಾರ್ವಜನಿಕ ಜೀವನಕ್ಕೆ ಬಂದ ಅನಂತಕುಮಾರ್ ಅವರು ಬಹುಬೇಗ ತಮ್ಮದೇ ಆದ ಛಾಪು ಮೂಡಿಸಿಕೊಂಡಿದ್ದರು. ಇದರ ಜತೆಗೆ ಸಮಾಜಸೇವಾ ಚಟುವಟಿಕೆಗಳಲ್ಲೂ ಅವರು ತಮ್ಮನ್ನು ಇತ್ತೀಚಿನ ವರ್ಷಗಳಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬರಲು ಕಾರಣಕರ್ತರಾದ ಹಲವರಲ್ಲಿ ಅನಂತಕುಮಾರ್ ಕೂಡ ಒಬ್ಬರಾಗಿದ್ದರು” ಎಂದು ದೇಶಪಾಂಡೆಯವರು ಶೋಕಿಸಿದ್ದಾರೆ.

         “ಮೂರು ದಶಕಗಳ ಸಾರ್ವಜನಿಕ ಜೀವನದಲ್ಲಿ ನಾಗರಿಕ ವಿಮಾನಯಾನ, ಯುವಜನ ಮತ್ತು ಕ್ರೀಡೆ, ಸಂಸ್ಕೃತಿ, ರಸಗೊಬ್ಬರ, ಸಂಸದೀಯ ವ್ಯವಹಾರ ಮುಂತಾದ ಖಾತೆಗಳನ್ನು ನಿರ್ವಹಿಸಿದ್ದ ಅವರು, ಹಲವು ಜನಪರ ನೀತಿಗಳ ಹಿಂದಿನ ನೈಜ ಶಕ್ತಿಯಾಗಿದ್ದರು,” ಎಂದು ಸಚಿವರು ಅಗಲಿದ ನಾಯಕನ ವ್ಯಕ್ತಿತ್ವವನ್ನು ಸ್ಮರಿಸಿಕೊಂಡಿದ್ದಾರೆ.

        “ಅನಂತಕುಮಾರ್ ಅವರ ನಿಧನದಿಂದ ಉಂಟಾಗಿರುವ ನೋವನ್ನು ಭರಿಸಿಕೊಳ್ಳುವ ಶಕ್ತಿಯನ್ನು ಭಗವಂತನು ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ನೀಡಲಿ. ಅವರ ಆತ್ಮಕ್ಕೆ ಶಾಂತಿ ದೊರಕಲಿ,” ಎಂದು ಸಚಿವರು ಪ್ರಾರ್ಥಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link