ಬೆಂಗಳೂರು
ಕೇಂದ್ರ ರಾಸಾಯನಿಕ, ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಎನ್ ಅನಂತಕುಮಾರ್ ಅವರ ನಿಧನಕ್ಕೆ ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ಮುಖಂಡ ಎಂ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅನಂತಕುಮಾರ್ ಅವರು ನನ್ನ ಪರಮಾಪ್ತ ಸ್ನೇಹಿತರಲ್ಲೊಬ್ಬರಾಗಿದ್ದರು. ಅಷ್ಟೇ ಅಲ್ಲ ! ರಾಜ್ಯ ಕಂಡ ಅತ್ಯುತ್ತಮ ಸಂಸದೀಯ ಪಟು. ಎಲ್ಲರ ಬಗ್ಗೆ ಅನಂತಕುಮಾರ್ ಅವರು ತೋರುತ್ತಿದ್ದ ಪ್ರೀತಿ ಮತ್ತು ವಿಶ್ವಾಸ, ವಿಶೇಷವಾಗಿ ಹಿರಿಯರಿಗೆ ನೀಡುತ್ತಿದ್ದ ಗೌರವ, ಅವಿಸ್ಮರಣೀಯವಾದುದು ಎಂದಿದ್ದಾರೆ.
ಅನಂತ ಕುಮಾರ್ ಅವರು ಪ್ರೀತಿಗೆ ಭಾಷೆ , ಪ್ರಾಂತ, ಪಕ್ಷ, ಜಾತಿ ಮತ್ತು ಧರ್ಮದ ಗಡಿ ಇರಲಿಲ್ಲ. ಸಂಸತ್ತಿನೊಳಗೆ ಏರು ಧ್ವನಿಯಲ್ಲಿ ಚರ್ಚೆ ನಡೆಸಿ ವಿರಾಮದ ವೇಳೆಯಲ್ಲಿ ಹೊರಬಂದಾಗ, ಅದೇಕೇ ಇಷ್ಟು ಸಿಟ್ಟು ಇಷ್ಟು ಮುನಿಸು ಎಂದು ಎಳೆ ನಗೆ ಬೀರಿ ಮತ್ತೆ ತನ್ನತ್ತ ಸೆಳೆಯುತ್ತಿದ್ದ ಅಯಸ್ಕಾಂತಿಕ ಶಕ್ತಿ ಅವರಲ್ಲಿತ್ತು. ಕರ್ನಾಟಕದ ವಿಷಯ ಬಂದಾಗ ಅವರು ತೋರುತ್ತಿದ್ದ ಕಳಕಳಿ ಮತ್ತು ಕಾಳಜಿ ಅನುಕಣೀಯವಾದುದು ಎಂದು ಮಧ್ಯಪ್ರದೇಶದಲ್ಲಿ ಪ್ರವಾಸದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
