ತುಮಕೂರು:
ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ನೀಡುತ್ತಿದ್ದ ಆಹಾರ ಪದಾರ್ಥವನ್ನು ಕದ್ದು ಮಾರಾಟ ಮಾಡುತ್ತಿದ್ದ ಅಂಗನವಾಡಿ ಶಿಕ್ಷಕಿಯನ್ನು ಗ್ರಾಮಸ್ಥರೇ ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ, ಇಂದಿರಾ ಕಾಲೋನಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದ ತಿಮ್ಮರಾಜಮ್ಮ ಕಳ್ಳತನ ಮಾಡುತ್ತಿದ್ದ ಶಿಕ್ಷಕಿ.
ಹಲವಾರು ಬಾರಿ ಮಕ್ಕಳಿಗೆ ಬಿಸಿಯೂಟ ಸರಿಯಾಗಿ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ದೂರು ನೀಡುತ್ತಿದ್ದರು. ಆದರೆ ಆಹಾರ ಇಲಾಖೆಯಿಂದಲೇ ಪದಾರ್ಥಗಳು ಕಡಿಮೆ ಬರುತ್ತಿದೆ ಎಂದು ಸಬೂಬು ಹೇಳುತ್ತಿದ್ದರು.
ಆದರೆ ಇತ್ತೀಚೆಗೆ ಸಿಸಿ ಕ್ಯಾಮೆರಾವನ್ನು ಅಂಗನವಾಡಿಯಲ್ಲಿ ಅಳವಡಿಸಲಾಗಿತ್ತು. ಇದರಿಂದಾಗಿ ಶಿಕ್ಷಕಿಯ ಚಾಲಾಕಿ ಕಳ್ಳತನ ಬಯಲಿಗೆ ಬಂದಿದೆ. ಆಹಾರ ಪದಾರ್ಥಗಳನ್ನು ಶಿಕ್ಷಕಿ ಕದಿಯೋದನ್ನು ಗ್ರಾಮಸ್ಥರು ವಿಡಿಯೋ ಮಾಡಿದ್ದಾರೆ. ಗ್ರಾಮಸ್ಥರು ಒಟ್ಟುಗೂಡಿ ಈಕೆಯನ್ನು ರೆಡ್‍ಹ್ಯಾಂಡ್ ಆಗಿ ಹಿಡಿಯಲು ಕಾರ್ಯತಂತ್ರ ರೂಪಿಸಿದ್ದರು ಎನ್ನಲಾಗಿದೆ.
ತಿಮ್ಮರಾಜಮ್ಮ ಗೋಣಿಚೀಲದಲ್ಲಿ ಎಣ್ಣೆ, ಬೆಲ್ಲ, ಬೇಳೆ ಮತ್ತಿತರ ವಸ್ತುಗಳನ್ನು ತುಂಬಿಕೊಂಡು ಜನರಲ್ ಸ್ಟೋರ್ ಗೆ ನೀಡುವಾಗ ಈಕೆ ಸಿಕ್ಕಿ ಬಿದ್ದಿದ್ದಾಳೆ. ತಕ್ಷಣ ಆಕೆ ಎಲ್ಲರ ಕಾಲಿಗೆ ಬಿದ್ದು ತಪ್ಪಾಯಿತು ಬಿಟ್ಟು ಬಿಡಿ ಎಂದು ಅಂಗಲಾಚಿದ್ದಾಳೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಅಂಗನವಾಡಿ ಶಿಕ್ಷಕಿಯನ್ನು ವಶಕ್ಕೆ ಪಡೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ