ಉತ್ತರಪ್ರದೇಶ

ಭಯೋತ್ಪಾದಕ ಸಂಘಟನೆ ಜೈಶ್ ಗೆ ಸೇರಿದವರು ಎನ್ನಲಾದ ಇಬ್ಬರು ಶಂಕಿತ ಉಗ್ರರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಬಂಧಿಸಿದೆ.
ಬಂಧಿತರನ್ನು ಜಮ್ಮು ಕಾಶ್ಮೀರದ ಕುಲ್ಗಾಮ್ ನ ಶಹನವಾಝ್ ಅಹ್ಮದ್ ಮತ್ತು ಪುಲ್ವಾಮದ ಆಖಿಬ್ ಅಹ್ಮದ್ ಮಾಲಿಕ್ ಎಂದು ಗುರುತಿಸಲಾಗಿದೆ. ಬಂಧಿತರಿಬ್ಬರೂ 20ರಿಂದ 25 ವರ್ಷ ವಯಸ್ಸಿನ ಜಮ್ಮು ಕಾಶ್ಮೀರಕ್ಕೆ ಸೇರಿದವರು ಎನ್ನಲಾಗಿದೆ.
ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಉತ್ತರ ಪ್ರದೇಶದ ಖಂಕಾಹ್ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಖಾಸಗಿ ಹಾಸ್ಟೆಲ್ ನಲ್ಲಿ ತಂಗಿದ್ದರು. ಇಬ್ಬರೂ ಉಗ್ರರು ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು, ಸಂಘಟನೆಯಲ್ಲಿ ಗ್ರೆನೇಡ್ ಎಕ್ಸ್ ಪರ್ಟ್ ಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶ ಪೊಲೀಸ್ ವರಿಷ್ಠಾಧಿಕಾರಿಗಳು, ಇಬ್ಬರೂ ಕಾಶ್ನೀರ ಮೂಲದವರಾಗಿದ್ದು, ಶಹನವಾಜ್ ಕುಲ್ಗಾಮ್ ನಿವಾಸಿಯಾಗಿದ್ದು, ಅಕಿಬ್ ಪುಲ್ವಾಮ ನಿವಾಸಿಯಾಗಿದ್ದಾನೆ. ಇಬ್ಬರ ಬಂಧನದ ವೇಳೆ ಎರಡು ಬಂದೂಕು ಮತ್ತು ಜೀವಂತ ಗುಂಡುಗಳಿರುವ 2 ಕಾರ್ಟ್ರಿಡ್ಜ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಉಗ್ರ ಸಂಘಟನೆಗಾಗಿ ಹಣವನ್ನು ಸಂಗ್ರಹಿಸುವ ಉದ್ದೇಶದಿಂದ ಈ ಇಬ್ಬರೂ ಉತ್ತರ ಪ್ರದೇಶಕ್ಕೆ ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದು, ಅಂತೆಯೇ ಇವರಿಗೆ ಹಣ ನೀಡುವವರು ಯಾರು, ಯಾರನ್ನು ಭೇಟಿ ಮಾಡಲು ಉಗ್ರರು ಅಗಮಿಸಿದ್ದರು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.
ದಿಯೋಬಂದ್ನ ಸಹರಾನ್ಪುರದ ಖಾಸಗಿ ಹಾಸ್ಟೆಲ್ ಒಂದಕ್ಕೆ ಎಟಿಎಸ್ ಅಧಿಕಾರಿಗಳು ದಾಳಿ ನಡೆಸಿದ್ದು, 7 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
