ಬೆಂಗಳೂರು:
ಆಂಬಿಡೆಂಟ್ ಕಂಪನಿಯ ಡೀಲ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ, ಈಗ ಜಾಮೀನು ಮೇಲೆ ಬಿಡುಗಡೆಯಾಗಿದ್ದು, ಇಂದು ಬೆಂಗಳೂರಿನ ತಮ್ಮ ‘ಪಾರಿಜಾತ’ ನಿವಾಸದಲ್ಲಿ ಭರ್ಜರಿ ಔತಣಕೂಟ ಏರ್ಪಡಿಸಿದ್ದಾರೆ.
ಈ ಔತಣ ಕೂಟದಲ್ಲಿ ಶಾಸಕ ಶ್ರೀರಾಮುಲು ಸಹ ಜನಾರ್ದನ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಇದರ ಮಧ್ಯೆ ಜನಾರ್ದನ ರೆಡ್ಡಿ ತಮ್ಮ ವಕೀಲರ ಜೊತೆಯೂ ಸಮಾಲೋಚನೆ ನಡೆಸಿದ್ದಾರೆಂದು ತಿಳಿದುಬಂದಿದೆ. ಜನಾರ್ದನ ರೆಡ್ಡಿಯವರ ಅತ್ಯಾಪ್ತರು, ಬಳ್ಳಾರಿ ಜಿಲ್ಲೆಯ ಬೆಂಬಲಿಗರು ಜೊತೆಗೆ ಆಂಧ್ರ ಪ್ರದೇಶದಿಂದ ಹಲವು ಸ್ನೇಹಿತರು ಆಗಮಿಸಿದ್ದು, ಪಾರಿಜಾತ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ.
ಕಾನೂನು ಹೋರಾಟಕ್ಕೆ ಸಿದ್ದವಾಗಿರುವ ಜನಾರ್ದನ ರೆಡ್ಡಿ ಅವರು ವಕೀಲರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಬಳಿಕ ಒಂದೇ ಕಾರಿನಲ್ಲಿ ಬಿಜೆಪಿ ಶಾಸಕ ಶ್ರೀರಾಮುಲು ಅವರೊಂದಿಗೆ ರೆಡ್ಡಿ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದ್ದು, ಇದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ