ಬೆಳಗಾವಿ :

ಇತ್ತೀಚೆಗೆ ನಮ್ಮನ್ನಗಲಿದ ಮಾಜಿ ಪ್ರಧಾನಿ ಎ.ಬಿ. ವಾಜಪೇಯಿ, ಕೇಂದ್ರ ಸಚಿವರಾದ ಸಿ.ಕೆ. ಜಾಫರ್ ಷರೀಫ್, ಅನಂತಕುಮಾರ್ ಹಾಗೂ ಎಂ.ಎಚ್. ಅಂಬರೀಷ್ ಮತ್ತಿತರ ಗಣ್ಯರಿಗೆ ವಿಧಾನಮಂಡಲದಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೃತರ ಗೌರವಾರ್ಥ ಎರಡೂ ಸದನಗಳ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಇಲ್ಲಿನ ಸುವರ್ಣಸೌಧದಲ್ಲಿ ಇಂದಿನ ಎರಡು ವಾರಗಳ ಕಾಲ ಆರಂಭಗೊಂಡ ಚಳಿಗಾಲದ ಅಧಿವೇಶನದಲ್ಲಿ ಸಭಾಧ್ಯಕ್ಷ ರಮೇಶ್ ಕುಮಾರ್, ಸಭಾಪತಿ ಬಸವರಾಜ ಹೊರಟ್ಟಿ ಉಭಯ ಸದನಗಳಲ್ಲಿ ಸಂತಾಪ ಸೂಚಕ ನಿರ್ಣಯ ಮಂಡಿಸಿ, ಅಗಲಿದ ಗಣ್ಯರ ಸಾಧನೆಯನ್ನು ಬಣ್ಣಿಸಿ, ದೇಶಕ್ಕೆ ಅವರು ಅಗಾಧ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ವಿಧಾನಸಭೆಯಲ್ಲಿ ಮಾಜಿ ಸಚಿವರಾದ ತಿಪ್ಪೇಸ್ವಾಮಿ, ಇ.ಟಿ. ಶಂಭುನಾಥ್, ಓಂ ಪ್ರಕಾಶ್ ಕಣಗಲಿ, ವಿಮಲಾಭಾಯಿ ದೇಶ್ ಮುಖ್, ಮಾಜಿ ಶಾಸಕರಾದ ಎಂ.ವಿ. ಶೆಟ್ಟಿ, ವಿ.ಕೆ. ಮಾಮನಿ, ಎಂ.ಪಿ. ರವೀಂದ್ರ, ಬಾಬುರೆಡ್ಡಿ ವೆಂಕಪ್ಪ ತುಂಗಳ, ಎಚ್.ಎಸ್. ಪ್ರಕಾಶ್, ಎಂ. ಭಕ್ತವತ್ಸಲಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿಧಾನಸಭೆಯಲ್ಲಿ ಸಂತಾಪ ಸೂಚಕ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಹಾಗೂ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ, ದೇಶದ ಅಭ್ಯುದಯಕ್ಕೆ ಎ.ಬಿ. ವಾಜಪೇಯಿ ಅವರು ಅನನ್ಯ ಕೊಡುಗೆ ನೀಡಿದ್ದಾರೆ. ವಿದೇಶಾಂಗ ಸಚಿವರಾಗಿದ್ದ ಸಂದರ್ಭದಲ್ಲಿ ಅವರು ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದರು. ಅವರ ಕಾಲದಲ್ಲಿ ಅಸ್ಥಿತ್ವಕ್ಕೆ ಬಂದ ಸುವರ್ಣ ಚತುಷ್ಪಥ ಹೆದ್ದಾರಿ ಯೋಜನೆ ದೇಶದ ಆರ್ಥಿಕ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆಯಾಗಿದೆ ಎಂದರು.
ಕೇಂದ್ರ ಸಚಿವರಾಗಿ ಅನಂತ್ ಕುಮಾರ್ ರಾಜ್ಯಕ್ಕೆ ಹೆಚ್ಚು ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ಆಸ್ಪತ್ರಗಳಲ್ಲಿ 50 ಸಾವಿರ ಜನರಿಕ್ ಔಷಧ ಮಳಿಗೆಗಳನ್ನು ತೆರೆದು ಬಡವರಿಗೆ ರಿಯಾಯಿತಿ ದರದಲ್ಲಿ ಔಷಧ ದೊರೆಯುವಂತೆ ಮಾಡಿದ್ದಾರೆ ಎಂದು ಬಣ್ಣಿಸಿದರು. ಸಿ.ಕೆ. ಜಾಫರ್ ಷರೀಫ್, ಅಂಬರೀಷ್ ಮತ್ತಿತರ ಸಾಧನೆಗಳನ್ನು ಅವರು ಮೆಲುಕು ಹಾಕಿದರು.
ಮೇಲ್ಮನೆಯಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ, ಗದುಗಿನ ತೋಂಟದಾರ್ಯ ಸ್ವಾಮೀಜಿ, ಹಿರಿಯ ಸಾಹಿತಿ ಡಾ.ಸುಮತೀಂದ್ರ ನಾಡಿಗ ಹಾಗೂ ಜ.ಹೋ.ನಾರಾಯಣಸ್ವಾಮಿ ಅವರ ನಿಧನಕ್ಕೆ ಸದನ ಕಂಬನಿ ಮಿಡಿಯಿತು.
ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿದ ಚಿತ್ರನಟಿಯೂ ಆದ ಸಭಾನಾಯಕಿ ಜಯಮಾಲಾ, ಚಿತ್ರನಟ ಅಂಬರೀಷ್ ಕಲಾವಿದರ ಸಂಘಕ್ಕೆ ಶಕ್ತಿಯಾಗಿದ್ದರು. ಅನಾರೋಗ್ಯದಲ್ಲಿಯೂ ಅವರು ಸಕ್ರಿಯ ರಾಜಕಾರಣದಲ್ಲಿದ್ದರು. ಅಂಬರೀಷ್ ನಿಧನ ರಾಜಕಾರಣ, ಚಿತ್ರರಂಗಕ್ಕೂ ತುಂಬಲಾರದ ನಷ್ಟವಾಗಿದೆ ಎಂದು ಭಾವುಕರಾದರು.
ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಕರ್ನಾಟಕದಲ್ಲಿ ಬಿಜೆಪಿ ಸಂಕಷ್ಟದಲ್ಲಿದ್ದಾಗ ಯಡಿಯೂರಪ್ಪ ಅವರ ಜೊತೆಗೂಡಿ ಅನಂತ್ ಕುಮಾರ್ ಪಕ್ಷ ಸಂಘಟಿಸಿದ್ದಾರೆ. ಯಡಿಯೂರಪ್ಪ ಅನಂತ್ ಕುಮಾರ್ ಇಬ್ಬರನ್ನೂ ಬಿಜೆಪಿಯಲ್ಲಿ ಹಕ್ಕ ಬುಕ್ಕ ಎನ್ನುತ್ತಿದ್ದರು.ಮುಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗುವ ಪಟ್ಟಿಯಲ್ಲಿ ಅನಂತ್ ಕುಮಾರ್ ಹೆಸರಿತ್ತು. ಅವರು ರಾಷ್ಟ್ರೀಯ ಅಧ್ಯಕ್ಷರಾಗುತ್ತಿದ್ದರು ಎಂದರು.
ನಂತರ ಮೃತರ ಗೌರವಾರ್ಥ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








