ಕೊರೋನಾ ಭಯವಿಲ್ಲದೇ ಉಚಿತ ಅಕ್ಕಿ ಬೇಳೆಗೆ ಮುಗಿಬಿದ್ದ ಜನತೆ!!

ಬಳ್ಳಾರಿ:

       ಇಂದು ಕೊರೋನಾ ವೈರಸ್ ರೌದ್ರ ತಾಂಡವವಾಡುತ್ತಿದೆ. ಇಡೀ ಪ್ರಪಂಚವೇ ಲಾಕ್‌ಡೌನ್ ಆಗಿದೆ. ದಿನೆ ದಿನೆ ಸಾವಿನ ಸಂಖ್ಯೆ ಹೆಚ್ಚುತ್ತಲೆ ಇದೆ. ಇದಕ್ಕೆ ಕರ್ನಾಟಕದ ಗಣಿ ನಗರಿ ಎಂದೇ ಪ್ರಸಿದ್ಧಿ ಪಡೆದ ಬಳ್ಳಾರಿಯೂ ಹೊರತಾಗಿಲ್ಲ.

       ಹೌದು, ಬಳ್ಳಾರಿ ಜಿಲ್ಲೆಯಲ್ಲಿ ಬರೊಬ್ಬರಿ ಆರು ಸೋಂಕಿತರಿಗೆ ವೈರಸ್ ದೃಢಪಟ್ಟಿದೆ. ದಿನ ದಿನಕ್ಕೂ ಹೋಂ ಕ್ವಾರಂಟೈನ್ ಆಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಮಧ್ಯೆ ಜನರಿಗೆ ಉಚಿತವಾಗಿ ನೀಡಲಾಗುತ್ತಿರುವ ಹಾಲಿನ ಪ್ಯಾಕೆಟ್‌ಗಳಿಗೆ ಹಾಗೂ ಅಕ್ಕಿ ಬೇಳೆಯ ಪ್ಯಾಕೆಟ್‌ಗಳಿಗೆ ಜನ ಮುಗಿ ಬೀಳುತ್ತಿದ್ದಾರೆ.

        ವೈರಸ್‌ನ ಪರಿಣಾಮ ದಿನೆ ದಿನೆ ಹೆಚ್ಚುತ್ತಿರುವುದಕ್ಕೆ ಸರ್ಕಾರವು ವಿವಿಧ ಕ್ರಮಗಳನ್ನು ಜರುಗಿಸುತ್ತಿದೆ. ಆರೋಗ್ಯ ಇಲಾಖೆಯು ಸಲಹೆ ಸೂಚನೆಗಳನ್ನು ನೀಡುತ್ತಿದೆ. ಪೊಲೀಸ್ ಇಲಾಖೆಯು ನಗರದಾದ್ಯಂತ ಬೀಟ್ ಹಾಕಿದ್ದಾರೆ. ಪ್ರತಿಯೊಂದು ವೃತ್ತದಲ್ಲಿಯು ಪೊಲೀಸರು ತಮ್ಮ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಇದ್ಯಾವುದನ್ನು ಲೆಕ್ಕಿಸದ ಜನ ದಿನದ 24 ಗಂಟೆಯು ರಸ್ತೆಗಳ ಮೇಲೆಯೆ ಇರುತ್ತಿದ್ದಾರೆ. ಇದರ ಜೊತೆಗೆ ಉಚಿತವಾಗಿ ದೊರೆಯುವ ದಿನಬಳಕೆ ಸಾಮಗ್ರಿಗಳಿಗೆ ಮುಗಿಬಿದ್ದು ವೈರಸ್ ಎಂಬ ಮಹಮ್ಮಾರಿಯನ್ನು ತಂದುಕೊಳ್ಳುತ್ತಿದ್ದಾರೆ.

      ಕಳೆದ ಮೂರ್‍ನಾಲ್ಕು ದಿನಗಳಿಂದ ಅಲ್ಲಲ್ಲಿ ಉಚಿತವಾಗಿ ಹಾಲಿನ ಪ್ಯಾಕೆಟ್‌ಗಳು, ಅಕ್ಕಿ, ಬೇಳೆ, ಸಾಂಬಾರ ಪದಾರ್ಥಗಳು ಸೇರಿದಂತೆ ಇನ್ನಿತರ ದಿನ ಬಳಕೆ ವಸ್ತುಗಳನ್ನು ವಿತರಿಸಲಾಗುತ್ತಿದೆ. ಸರ್ಕಾರದ ಸಲಹೆ ಸೂಚನೆಗಳಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವಿತರಣೆ ಮಾಡಿದರೆ ಯಾವುದೆ ಸಮಸ್ಯೆ ಆಗುವುದಿಲ್ಲ. ಆದರೆ ಈ ರೀತಿಯ ಯಾವುದೇ ಕ್ರಮಗಳನ್ನು ವಹಿಸದೆ ಗುಂಪು ಗುಂಪಾಗಿ ಸೇರಿಕೊಂಡು ಹಳ್ಳಿ ಸಂತೆಗೂ ಕಡೆಯಾಗಿದ್ದಾರೆ.

       ಕಳೆದ 15 ದಿನಗಳಿಂದ ದೇಶದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದಾಗಿನಿಂದಲೂ ಹಲವು ಕುಟುಂಬಗಳಿಗೆ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ವಿವಿಧ ಕ್ರಮಗಳನ್ನು ವಹಿಸಲಾಗಿದೆ. ರೆಡ್ ಕ್ರಾಸ್ ಘಟಕದಿಂದ ಊಟದ ಪ್ಯಾಕೆಟ್‌ಗಳನ್ನು ನೀಡಲಾಗುತ್ತಿದೆ. ನಗರ ಶಾಸಕರು ಅಲ್ಲಲ್ಲಿ ಆಹಾರ ಧಾನ್ಯಗಳ ವಿತರಣೆ ಮಾಡಿದ್ದಾರೆ. ಇದರ ನಡುವೆ ಬಡವರಿಗೆ ನೀಡಲೆಂಬ ಉದ್ದೇಶದಿಂದ ತರುವ ಧಾನ್ಯಗಳ ವಿತರಣೆ ಕಾರ್ಯ ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ.

      ಜನರ ಈ ರೀತಿಯ ವರ್ತನೆಯಿಂದ ಸರ್ಕಾರದ ಕ್ರಮಗಳು ವ್ಯರ್ಥವಾಗುತ್ತಿವೆ ಹೊರತು ಲಾಭವಾಗುತ್ತಿಲ್ಲ. ಕೋರೊನ ವೈರಸ್‌ನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಡುತ್ತಿರುವ ಪ್ರಯತ್ನಗಳು ವ್ಯರ್ಥವಾಗುವುದರಲ್ಲಿ ಸಂಶಯವಿಲ್ಲ. ಬಡಜನರಿಗೆ ನೀಡುವ ದಿನಸಿ ಸಾಮಗ್ರಿಗಳು ವಿತರಣೆಯೂ ಕ್ರಮಬದ್ದವಾಗಿ ಮಾಡಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲ ವೀಡಿಯೋಗಳಿಂದ ಜನರು ಭಯಬೀತರಾಗಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆಯೂ ಹೆಚ್ಚುತ್ತಿದ್ದು, ಇನ್ನಷ್ಟು ಹೆಚ್ಚಳವಾಗುವುದರಲ್ಲಿ ಸಂಶಯವಿಲ್ಲ. ಸರ್ಕಾರದ ಆದೇಶಗಳನ್ನು ಸೂಕ್ತ ರೀತಿಯಾಗಿ ಪಾಲನೆ ಮಾಡಿದಾಗ ಮಾತ್ರ ಈ ವೈರಸ್ ತಡೆಗಟ್ಟಬಹುದಾಗಿದೆ.

      ಏ.7ರ ಮಂಗಳವಾರದಂದು ೧೬ನೇ ವಾರ್ಡಿನ ಅಂಜಿನಪ್ಪ ಮಿಲ್ ಬಳಿ ಕಾಂಗ್ರೆಸ್ ಮುಖಂಡರೊಬ್ಬರು ಧವಸ ಧಾನ್ಯಗಳನ್ನು ಹಂಚಲು ಬಂದಾಗ ನಡೆದ ಘಟನೆಯನ್ನು ನೋಡಿದರೆ ಅಲ್ಲಿ ಬಡವ ಬುಗ್ಗರಿಗಿಂತ ಜೀವನ ನಡೆಸುವ ಸಾಮರ್ಥ್ಯವುಳ್ಳವರೇ ಹೆಚ್ಚಿದ್ದಾರೆ. ಹಂಚಲು ಬಂದ ಮುಖಂಡರು ಕೂಡ ಸರಿಯಾದ ರೀತಿಯಲ್ಲಿ ಹಂಚಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತು. ಆದರೆ ಅವರು ಕೂಡ ಇಷ್ಟ ಬಂದಂತೆ ವಾಹನವನ್ನು ತಂದು ನಿಲ್ಲಿಸುತ್ತಿದ್ದಂತೆ ಕೆಲ ಪುಂಡ ಪೋಕರಿಗಳು ಮನಸೋ ಇಚ್ಛೇ ವಾಹನದೊಳಗೆ ನುಗ್ಗಿ ಇರುವ ಪ್ಯಾಕೆಟ್‌ಗಳನ್ನು ಚೆಲ್ಲಾಪಿಲ್ಲಿಯಾಗಿ ಮಾಡಿ ಅರ್ಧ ಪ್ಯಾಕೆಟ್‌ಗಳನ್ನು ಒಬ್ಬೊಬ್ಬರೆ ನಾಲ್ಕೈದು ಕಿತ್ತುಕೊಂಡು ಪರಾರಿಯಾದರೆ ಇನ್ನು ಕೆಲವರು ಪ್ಯಾಕೆಟ್‌ಗಳ ತೆಗೆದುಕೊಳ್ಳುವಲ್ಲಿ ಕಿತ್ತಾಡಿ ಮಣ್ಣು ಪಾಲಾಯಿತು.

      ಸರ್ಕಾರವು ಹಗಲಿರುಳು ಕಷ್ಟಬಿದ್ದು, ವೈರಸ್ ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವ ಈ ಸಮಯದಲ್ಲಿ ಬಡವರಿಗೆ ನೀಡಲು ತಂದ ಅಕ್ಕಿ, ಬೇಳೆ ಪ್ಯಾಕೆಟ್‌ಗಳನ್ನು ತೆಗೆದುಕೊಳ್ಳಲು ಕಿತ್ತಾಡುತ್ತಾ, ಗುಂಪು ಗುಂಪು ಸೇರಿಕೊಂಡಿರುವುದು ವೈರಸ್‌ನ್ನು ನಾವೇ ಆಹ್ವಾನ ಮಾಡಿದಂತಿದೆ. ಅಕ್ಕಿ ಬೇಳೆ ವಿತರಣೆ ಮಾಡುವವರು ಏರಿಯಾಗೆ ಬಂದು ಮನೆಗೆ ಒಂದು ಪ್ಯಾಕೆಟ್ ವಿತರಣೆ ಮಾಡಿದರೆ ಉತ್ತಮ.

– ಶಿವಕುಮಾರ್, ಸ್ಥಳೀಯರು.

 

      ಬಡವರಿಗೆ ವಿತರಿಸಲು ಎಂದು ತಂದ ಪ್ಯಾಕೆಟ್‌ಗಳನ್ನು ಕೆಲ ಪುಂಡ ಪೋಕರಿಗಳು ದೌರ್ಜನ್ಯದಿಂದ ಎಳೆದುಕೊಂಡ ಹೋದ ಘಟನೆಯು ನಡೆಯಿತು. ವಿತರಿಸಲು ಬಂದಿದ್ದ ಕಾಂಗ್ರೆಸ್ ಮುಖಂಡ ಅಲ್ಲಿನ ಸ್ಥಿತಿಯನ್ನು ಕಂಡು ಕೈ ಚೆಲ್ಲಿ ಕುಳಿತರು. ಇದರ ಬದಲಾಗಿ ಪೊಲೀಸ್ ಇಲಾಖೆಯ ಸಹಾಯ ಪಡೆದು ಅಥವಾ ಕೊರೋನಾ ಸೈನಿಕರ ಸಹಾಯ ಪಡೆದು ವಿತರಣೆ ಮಾಡಿದ್ದರೆ ಎಲ್ಲರಿಗೂ ತಲುಪಿಸಬಹುದಿತ್ತು.

ಮಲ್ಲೇಶ್, ಹಿರಿಯ ನಾಗರಿಕರು

 

Recent Articles

spot_img

Related Stories

Share via
Copy link