ಬೆಂಗಳೂರು:
ಅಂಗಡಿ-ಮುಂಗಟ್ಟು, ಕಚೇರಿ ಮೊದಲಾದ ವಾಣಿಜ್ಯ ಮಳಿಗೆಗಳ ನಾಮಫಲಕ ಕನ್ನಡ ಭಾಷೆಯಲ್ಲಿ ಇಲ್ಲದಿದ್ದರೆ ಪರವಾನಿಗೆ ರದ್ದುಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ತೀರ್ಮಾನಿಸಿದೆ.
ಸುಮಾರು 13 ಸಾವಿರ ಅಂಗಡಿ-ಮುಂಗಟ್ಟು ಮಳಿಗೆಗಳಿಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಲಾಗಿದ್ದು, ನವೆಂಬರ್ 30ರ ನಂತರ ಕನ್ನಡ ನಾಮಫಲಕಗಳಿಲ್ಲದ ಅಂಗಡಿಗಳ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಪರವಾನಿಗೆ ಪಡೆದು ನಿರ್ವಹಿಸುತ್ತಿರುವ 20,689 ಅಂಗಡಿಗಳ ಪೈಕಿ 7,734 ಅಂಗಡಿಗಳು ಮಾತ್ರ ಕನ್ನಡ ನಾಮಫಲಕ ಬಳಸುತ್ತಿರುವುದು ಕಂಡು ಬಂದಿದೆ. ಇನ್ನುಳಿದ 13 ಸಾವಿರಕ್ಕಿಂತ ಹೆಚ್ಚು ಅಂಗಡಿಗಳು ಈ ನಿಯಮ ಪಾಲಿಸುತ್ತಿಲ್ಲ. ಇಂಥ ಅಂಗಡಿಗಳನ್ನು ಗುರುತಿಸಿ ನೋಟೀಸ್ ಕೊಡಲಾಗಿದೆ.
ಬಿಬಿಎಂಪಿ ನಿಯಮಾವಳಿಯ ಪ್ರಕಾರ ಅಂಗಡಿ ಮಳಿಗೆಗಳ ನಾಮಫಲಕದಲ್ಲಿ ಕನಿಷ್ಠ ಶೇಕಡ 60ರಷ್ಟು ಕನ್ನಡ ಭಾಷೆಯನ್ನು ಬಳಸಿರಬೇಕು. ಉಳಿದ ಭಾಗದಲ್ಲಿ ಯಾವುದೇ ಭಾಷೆಯಲ್ಲಾದರೂ ಬರೆದುಕೊಳ್ಳಬಹುದು. ನವಂಬರ್ 1 ರಿಂದಲೇ ಈ ನಿಯಮ ಜಾರಿಗೆ ಬರಬೇಕಿತ್ತು. ಆದರೆ, ನವಂಬರ್ 30ರ ವರೆಗೆ ಕಾಲಾವಕಾಶ ನೀಡಲಾಗಿದೆ. ಕನ್ನಡ ನಾಮಫಲಕ ಅಳವಡಿಕೆಗೆ ಇಂದು ಕೊನೆಯ ದಿನವಾಗಿದ್ದು, ನಿಯಮ ಪಾಲಿಸದ ಅಂಗಡಿಗಳ ಲೈಸೆನ್ಸ್ ರದ್ದು ಮಾಡಲು ಮೇಯರ್ ಗೌತಮ್ ಕುಮಾರ್ ಜೈನ್ ಸೂಚನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ