ಬೆಂಗಳೂರು:
ನಮ್ಮ ಶಾಸಕ ಶ್ರೀಮಂತ್ ಪಾಟೀಲ್ ರನ್ನು ಬಿಜೆಪಿ ನಾಯಕರೇ ಕಿಡ್ನಾಪ್ ಮಾಡಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಅವರು ಆರೋಪ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ನಿರ್ಣಯ ಮಂಡಿಸಿದ್ದು, ಇದರ ಮೇಲೆ ನಡೆದ ಚರ್ಚೆ ಹಲವು ದಿಕ್ಕಿನೆಡೆಗೆ ತಿರುಗಿ, ಆರೋಪ-ಪ್ರತ್ಯಾರೋಪಗಳಿಗೆ ಸಾಕ್ಷಿಯಾಗುತ್ತಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ಕಲಾಪ ಪುನಾರಂಭವಾಗಿದ್ದು, ಈ ವೇಳೆ ಮಾತನಾಡಿದ ಸಚಿವ ಡಿಕೆ ಶಿವಕುಮಾರ್ ಅವರು, ಬಿಜೆಪಿ ಮುಖಂಡರೊಬ್ಬರು ಬಲವಂತವಾಗಿ ನಮ್ಮ ಪಕ್ಷದ ಶಾಸಕ ಶ್ರೀಮಂತ್ ಪಾಟೀಲ್ ಅವರನ್ನು ಮುಂಬೈಗೆ ಅಪಹರಣ ಮಾಡಿಕೊಂಡು ಹೋಗಿದ್ದಾರೆ. ಎಂದು ಆರೋಪಿಸಿದರು.
“ಬಿಜೆಪಿ ನಮ್ಮ ಶಾಸಕರನ್ನು ಅಪಹರಣ ಮಾಡಿದ್ದಕ್ಕೆ ದಾಖಲೆ ಕೊಡುವೆ” ಎಂದು ಶ್ರೀಮಂತ ಪಾಟೀಲ್ ಆಸ್ಪತ್ರೆಯಲ್ಲಿ ಮಲಗಿರುವ ಫೋಟೋ ಮತ್ತು ಮುಂಬೈಗೆ ವಿಶೇಷ ವಿಮಾನದಲ್ಲಿ ಹೋದ ಟಿಕೆಟ್‌ಗಳನ್ನು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನೀಡುವಂತೆ ಡಿ. ಕೆ. ಶಿವಕುಮಾರ್ ಹೇಳಿದರು.
ಡಿ. ಕೆ. ಶಿವಕುಮಾರ್ ಮಾತಿಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ರಮೇಶ್ ಕುಮಾರ್, “ತನಿಖೆ ಮಾಡಿಸುವ ಕೆಲಸ ನನ್ನದಲ್ಲ. ತನಿಖೆ ಮಾಡಿಸಬೇಕು ಎಂದರೆ ಮೊದಲು ನಾಯಕರು ನನಗೆ ದೂರು ಕೊಡಬೇಕಾಗಿತ್ತು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ನಡುವೆ ಮಾತಿನ ಚಕಮಕಿ ನಡೆಯಿತು.
