ಬಾಗಲಕೋಟೆ :
ಪುರಸಭೆ ಸದಸ್ಯೆಯರ ನೂಕಾಟದಲ್ಲಿ ಕೆಳಗೆ ಬಿದ್ದಿದ್ದ ಗರ್ಭಿಣಿ ಸದಸ್ಯೆ ಚಾಂದಿನಿ ನಾಯಕ್ ಅವರಿಗೆ ಮಹಲಿಂಗಪುರ ಸರಕಾರಿ ಆಸ್ಪತ್ರೆಯಲ್ಲಿ ಗರ್ಭಪಾತವಾಗಿದೆ.
ನ.9ರಂದು ಜಿಲ್ಲೆಯ ಮಹಾಲಿಂಗಪುರದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಈ ವೇಳೆ ಆ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಬಿಜೆಪಿಯ ಮೂವರು ಸದಸ್ಯೆಯರು, ತಮಗೆ ಅವಕಾಶ ಸಿಗದೇ ಇದ್ದ ಕಾರಣಕ್ಕೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಬೆಂಬಲ ವ್ಯಕ್ತಪಡಿಸಲು ಮುಂದಾಗಿದ್ದರು. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ತೇರದಾಳ ಶಾಸಕ ಸಿದ್ದು ಸವದಿ ಹಾಗೂ ಬೆಂಬಲಿಗರು ಬಿಜೆಪಿಯ ಸದಸ್ಯರಾದ ಗೋದಾವರಿ, ಚಾಂದಿನಿ ನಾಯ್ಕ ಹಾಗೂ ಸವಿತಾ ಹುರಕಡ್ಲಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದರು.
ಬಿಜೆಪಿಯ ಮಹಿಳಾ ಸದಸ್ಯೆಯನ್ನು ಶಾಸಕ ಸಿದ್ದು ಸವದಿ ಎಳೆದಾಡಿ ಅವಮಾನಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಿಜೆಪಿಯ ಮೂವರು ಮಹಿಳಾ ಸದಸ್ಯರ ಮೇಲೆ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದ ಆರೋಪ ಕೇಳಿಬಂದಿದ್ದು, ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತಗೊಂಡಿತ್ತು.
ಇದೀಗ ಹಲ್ಲೆಗೊಳಗಾಗಿದ್ದ ಮಹಿಳಾ ಸದಸ್ಯರ ಪೈಕಿ ಗಾಯಗೊಂಡಿದ್ದ ಚಾಂದಿನಿ ನಾಯ್ಕ ಅವರಿಗೆ ಗರ್ಭಪಾತವಾಗಿರುವ ವಿಷಯ ಬೆಳಕಿಗೆ ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ