ಬೆಂಗಳೂರು:
ಆಪರೇಷನ್ ಕಮಲ ಆಡಿಯೋವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸಿದರೆ ಶೇ.60ರಷ್ಟು ಶಾಸಕರಿಗೆ ಸಂಕಷ್ಟ ಎಂದು ಹೇಳುವ ಮೂಲಕ ಶಾಸಕ ಮಾಧುಸ್ವಾಮಿ ಎಸ್.ಐ.ಟಿ.ತನಿಖೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ನಿನ್ನೆ(ಸೋಮವಾರ) ಕಲಾಪದಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿದೆ ಎನ್ನಲಾದ ಆಡಿಯೋ ಪ್ರಕರಣದ ಕುರಿತು ಭಾರೀ ಚರ್ಚೆಯ ಬಳಿಕ ಸ್ಪೀಕರ್ ರಮೇಶ್ ಕುಮಾರ್ ಅವರು ಈ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸುವಂತೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರಿಗೆ ಸೂಚನೆ ನೀಡಿದ್ದರು. ಈ ಬೆನ್ನಲ್ಲೇ ಬಿಜೆಪಿ ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿತ್ತು.
ಇಂದು ಸದನ ಪ್ರಾರಂಭವಾಗುತ್ತಿದ್ದಂತೆ ಮಾತನಾಡಿದ ಮಾಧುಸ್ವಾಮಿ, ಎಸ್‍ಐಟಿ ತನಿಖೆಗೆ ನಾವು ವಿರೋಧಿಸುತ್ತೇವೆ. ಹಾಗೆಂದು ನಿಮ್ಮ ತೀರ್ಮಾನಕ್ಕೆ ಅಗೌರವ ಕೊಡುತ್ತಿಲ್ಲ. ನಿಮ್ಮ ಗೆಳೆಯನಾಗಿ ನಾನು ವಿನಂತಿ ಮಾಡುತ್ತೇನೆ. ನಿಮ್ಮ ಹಿತೈಷಿಯಾಗಿ ಹೇಳುತ್ತಿದ್ದೇನೆ. ದಯಮಾಡಿ ನಿಲ್ಲಿಸಿ. ನಮ್ಮ ತಪ್ಪಾಗಿದೆ ಎಂದು ಒಪ್ಪಿಕೊಳ್ಳುತ್ತೇವೆ. ಹೀಗಾಗಿ ತಮ್ಮ ನಿರ್ಧಾರ ಮರುಪರಿಶೀಲಿಸಿ ಎಂದು ಮಾಧುಸ್ವಾಮಿ ಅವರು ಬಿಎಸ್‍ವೈ ಪರ ಬ್ಯಾಟಿಂಗ್ ಮಾಡಿದ್ದಾರೆ.
ಪೊಲೀಸರ ಜೊತೆಗೆ ಸ್ನೇಹವೂ ಒಳ್ಳೆಯದಲ್ಲ, ದ್ವೇಷವೂ ಒಳ್ಳೆಯದಲ್ಲ. ಶಾಸಕರು ಪೊಲೀಸರ ಮುಂದೆ ಹೇಳಿಕೆ ನೀಡಬೇಕಾ,.? ಎಸ್‍ಐಟಿ ತನಿಖೆಗೆ ಒಪ್ಪಿಸುವುದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತೆ. ಇದನ್ನ ಎಳೆದುಕೊಂಡು ಹೋಗುವುದರಲ್ಲಿ ಅರ್ಥವಿಲ್ಲ. ಇದರಿಂದ ಶೇ.60ರಷ್ಟು ಶಾಸಕರಿಗೆ ಸಂಕಷ್ಟ. ಅದರ ಬದಲು ಶಾಸಕರಿರುವ ಸದನ ಸಮಿತಿ ಮಾಡಿ. ಇಲ್ಲ ಹಾಲಿ ಜಡ್ಜ್ನ ತನಿಖೆ ಜವಾಬ್ದಾರಿ ನೀಡಿ. ಇದರಲ್ಲಿ ಕೆಟ್ಟ ಉದ್ದೇಶ ಯಾರದ್ದು ಎನ್ನುವುದನ್ನು ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
