ಕಳೆದುಹೋಗಿದ್ದ ಮಗುವಿನ ಮೃತ ದೇಹ ನದಿಯಲ್ಲಿ ಪತ್ತೆ!!

ಕುಂದಾಪುರ:

      ನಿನ್ನೆ ಮುಂಜಾನೆ ಮನೆಯೊಳಗಿನಿಂದ ಮಲಗಿದ ಸ್ಥಳದಿಂದಲೇ ಅಪಹರಣಕ್ಕೊಳಗಾಗಿದ್ದ ಮಗುವಿನ ಮೃತ ದೇಹ ಇಂದು ಸಮೀಪದ ಕುಬ್ಜಾ ನದಿಯಲ್ಲಿ ಪತ್ತೆಯಾಗಿದೆ.

      ಯಡಮೊಗೆ ಗ್ರಾಮದ ಕುಮ್ಚಿಬೇರು ಸಂತೋಷ್ ನಾಯ್ಕ ಹಾಗೂ ರೇಖಾ ದಂಪತಿಯ 1 ವರ್ಷ 3 ತಿಂಗಳ ಪ್ರಾಯದ ಸಾನ್ವಿಕಾ ಎಂಬ ಹೆಣ್ಣು ಮಗುವನ್ನು ಗುರುವಾರ ಮುಂಜಾನೆ ಮನೆಯೊಳಗಿನಿಂದ ಮುಸುಕುಧಾರಿ ವ್ಯಕ್ತಿಯೊಬ್ಬ ಅಪಹರಿಸಿದ್ದ ಎಂದು ದೂರು ನೀಡಲಾಗಿತ್ತು .

      ತಾನು, ಮಗ ಹಾಗೂ ಹೆಣ್ಣು ಮಗು ಮಲಗಿರುವ ಸಂದರ್ಭ ಮನೆಯ ಹಿಂಬದಿಯ ಬಾಗಿಲಿನ ಮೂಲಕ ಒಳನುಗ್ಗಿದ ಮುಸುಕುಧಾರಿ ವ್ಯಕ್ತಿ ಮಗುವನ್ನು ಎತ್ತಿಕೊಂಡಿದ್ದಾನೆ. ಮಗು ಅಳುವುದನ್ನು ಕೇಳಿಸಿಕೊಂಡು, ಎಚ್ಚರಗೊಂಡು ನಿದ್ದೆಯ ಮಂಪರಿನಲ್ಲಿ ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಆ ವ್ಯಕ್ತಿ ಮಗುವನ್ನು ಎತ್ತಿಕೊಂಡು ಮನೆ ಸಮೀಪದ ಕುಬ್ಜಾ ನದಿಯನ್ನು ದಾಟಿ ಪರಾರಿಯಾದ ಎಂದು ರೇಖಾ ತಿಳಿಸಿದ್ದರು.

ಈ ವೇಳೆ ತಾನು ತನ್ನ ಇನ್ನೊಂದು ಐದು ವರ್ಷದ ಮಗುವನ್ನು ಎತ್ತಿಕೊಂಡು ಅಪಹರಣಕಾರನನ್ನು ಬೆನ್ನಟ್ಟಿದೆ, ಆದರೆ ಅಪಹರಣಕಾರ ನದಿ ನೀರಿನಲ್ಲಿಳಿದು ಮುಂದಕ್ಕೆ ಸಾಗಿದಾಗ ತಾನು ಕೂಡ ನೀರಿಗೆ ಧುಮುಕಿದ್ದೆ , ಆದರೆ ಮಗುವನ್ನು ರಕ್ಷಿಸುವ ಪ್ರಯತ್ನ ಮಾಡಿದರೂ ಅದು ಅಸಾಧ್ಯವಾಗಿತ್ತು, ಅಪಹರಣಕಾರ ಮರೆಯಾಗಿದ್ದ ಎಂದು ರೇಖಾ ಪೊಲೀಸರಿಗೆ ಹೇಳಿಕೆ ನೀಡಿದ್ದರು.

      ನೀರಿನಲ್ಲಿ ಸೆಳೆತಕ್ಕೆ ಸಿಲುಕಿಕೊಂಡು ತಾಯಿ ಹಾಗೂ ಗಂಡು ಮಗುವಿನ ಬೊಬ್ಬ ಕೇಳಿಸಿದಾಗ ಸ್ಥಳಕ್ಕೆ ಬಂದು ತಾವು ರಕ್ಷಿಸಿದೆವು ಎಂದು ಸ್ಥಳೀಯರು ತಿಳಿಸಿದ್ದರು.

      ಘಟನೆಯ ಬಗ್ಗೆ ಮಾಹಿತಿ ಪಡೆದ ಉಡುಪಿ ಎಸ್ಪಿ ನಿಶಾ ಜೇಮ್ಸ್, ನಿನ್ನೆ ಬೆಳಿಗ್ಗೆ ಘಟನೆ ನಡೆದ ಸ್ಥಳಕ್ಕೆ ಬಂದವರು ಸ್ಥಳದಲ್ಲಿ ಸಂಜೆಯವರೆಗೂ ಹಾಜರಿದ್ದು ತನಿಖೆಗೆ ಮಾರ್ಗದರ್ಶನ ನೀಡಿದ್ದರು . ಹಲವರ ವಿಚಾರಣೆಯನ್ನು ನಡೆಸಲಾಗಿತ್ತು. ಗಂಭೀರ ಪ್ರಕರಣವಾದ ಕಾರಣ ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ನೇತೃತ್ವ ತನಿಖೆ ಮುಂದುವರೆದಿತ್ತು.

      ಶುಕ್ರವಾರದಂದು ಕೂಡ ಡಿವೈಎಸ್ಪಿ ನೇತೃತ್ವದಲ್ಲಿ ಸಾರ್ವಜನಿಕರು ಕುಬ್ಜಾ ಹೊಳೆಯಲ್ಲಿ ಹುಡುಕಾಟ ನಡೆಸಿದ್ದು ಮನೆಯಿಂದ ಅರ್ಧ ಕಿ.ಮೀ. ದೂರದ ಕಾರೂರು ಎಂಬಲ್ಲಿ ಹೊಳೆಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.

      ನದಿಯಲ್ಲಿ ಮಗುವಿನ ಮೃತ ದೇಹ ಪತ್ತೆಯಾಗುತ್ತಿದ್ದಂತೆ ಅಪಹರಣ ಪ್ರಕರಣದ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದೆ‌. ಪ್ರಕರಣ ಬೇರೆಯದ್ದೇ ತಿರುವು ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

      ಪೊಲೀಸರಿಂದ ಮಗುವಿನ ತಾಯಿ-ತಂದೆಯ ತೀವ್ರ ವಿಚಾರಣೆ ನಡೆಯುತ್ತಿದೆ. ಸ್ಥಳಕ್ಕೆ ಪೊಲೀಸ್ ಉನ್ನತಾಧಿಕಾರಿಗಳು ಭೇಟಿ ನೀಡಿದ್ದಾರೆ. ಮಗುವಿನ ಶವ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ‌.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap