ಮಂಗಳೂರು:
ಸೇತುವೆಯಿಂದ ಬೊಲೆರೋ ವಾಹನವೊಂದು ನದಿಗೆ ಬಿದ್ದ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ಮಂಗಳೂರು ತಾಲೂಕಿನ ಕಿನ್ನಿಗೋಳಿ ಬಳಿಯ ಸಂಕಲಕರಿಯದಲ್ಲಿ ನಡೆದಿದೆ.
ಮದುವೆಗೆಂದು ಕುಟುಂಬ ಸಮೇತ ಬೊಲೆರೋ ವಾಹನದಲ್ಲಿ ತೆರಳಿದ್ದವರು ವಾಹನ ಸಮೇತ ಸೇತುವೆಯಿಂದ ಕೆಳಕ್ಕುರುಳಿದ್ದು ವಾಹನದಲ್ಲಿದ್ದ ಬೋಳ ಗ್ರಾಮದ ಮಹಿಳೆ ಡಯಾನಾ (45ವರ್ಷ) ಮೃತಪಟ್ಟಿದ್ದಾರೆ.
ಕಾರ್ಕಳ ತಾಲೂಕಿನ ಬೋಳ ಗ್ರಾಮದ ಪದವು ನಿವಾಸಿ ಸ್ಟ್ಯಾನಿ ಮಸ್ಕರೇನ್ಹಸ್ ಅವರು ಕುಟುಂಬ ಸಮೇತ ಮಂಗಳೂರಿಗೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ವಾಹನದಲ್ಲಿ ಸ್ಟ್ಯಾನಿ ಅವರ ಪತ್ನಿ ಡಯಾನಾ, ಮಕ್ಕಳಾದ ಶೆಲ್ಡನ್ ಮತ್ತು ಅರ್ಮಾನ್ ಜೊತೆಗಿದ್ದರು. ಸಂಕಲಕರಿಯ ಸಮೀಪ ಶಾಂಭವಿ ನದಿ ಸೇತುವೆ ಮೇಲಿಂದ ಇವರಿದ್ದ ಬುಲೇರೋ ವೇಗವಾಗಿ ಬಂದಿದ್ದು, ಆಯತಪ್ಪಿ ನದಿಗೆ ಬಿದ್ದಿದೆ. ಪರಿಣಾಮ ಡಯಾನ ನದಿಯಲ್ಲಿಯೇ ಮೃತಪಟ್ಟಿದ್ದಾರೆ.
ನದಿಗುರುಳಿದ ವಾಹನ ಕಂಡು ಸ್ಥಳೀಯರು ನೀರಿಗೆ ಧುಮುಕಿ ಮೂವರನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಡಯಾನಾ ಅವರು ಮೃತಪಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ