ಮನೆಯಲ್ಲಿ ಫ್ರಿಡ್ಜ್‌, ಬೈಕ್‌, ಟಿವಿ ಇದ್ದಲ್ಲಿ ಬಿಪಿಎಲ್ ಪಡಿತರ ಚೀಟಿ ರದ್ದು!!

ಬೆಳಗಾವಿ: 

     “ಮನೆಯಲ್ಲಿ ಫ್ರಿಡ್ಜ್‌, ಬೈಕ್‌‌, ಟಿವಿ ಇದ್ದಲ್ಲಿ ಬಿಪಿಎಲ್‌ ಪಡಿತರ ಚೀಟಿ ರದ್ದು ಮಾಡಲಾಗುವುದು” ಎಂದು ನಾಗರಿಕ ಪೂರೈಕೆ ಸಚಿವ ಉಮೇಶ್‌ ಕತ್ತಿ ಹೇಳಿದ್ದಾರೆ.

     ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಕ್ರಮ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಲು ಇನ್ನೂ ಸ್ವಲ್ಪ ಸಮಯಬೇಕು. ಬಿಪಿಎಲ್ ಕಾರ್ಡ್ ಯಾರ ಹತ್ತಿರ ಇರಬೇಕೆಂಬ ಮಾನದಂಡಗಳು ಇವೆ. 5 ಎಕರೆಗಿಂತ ಹೆಚ್ಚು ಜಮೀನಿರಬಾರದು. ಮೋಟಾರ್ ಸೈಕಲ್,‌ ಟಿವಿ ಮತ್ತು ಫ್ರಿಡ್ಜ್ ಇರಬಾರದು ಎಂಬ ಮಾನದಂಡಗಳಿವೆ. ಈ ಎಲ್ಲ ಮಾನದಂಡ ಯಾರಿಗೆ ಅನ್ವಯಿಸುತ್ತೋ ಅವರೆಲ್ಲ ಬಿಪಿಎಲ್ ಕಾರ್ಡ್ ಮರಳಿ ಕೊಡಬೇಕಾಗುತ್ತದೆ ಎಂದು ಹೇಳಿದರು. 

    “ಅರೆ ಸರ್ಕಾರರಿ ಅಧಿಕಾರಿಗಳು ಸೇರಿದಂತೆ ಸರ್ಕಾರಿ ಅಧಿಕಾರಿಗಳು 1.20 ಲಕ್ಷ ಆದಾಯ ಇರುವವರು ಬಿಪಿಎಲ್‌ ಕಾರ್ಡ್ ಹೊಂದಿರಲು ಸಾಧ್ಯವೇ ಇಲ್ಲ. ಆದರೂ ಕೂಡಾ ಕೆಲವು ಅಧಿಕಾರಿಗಳು ಕಾರ್ಡ್ ಹೊಂದಿರುವ ಬಗ್ಗೆ ದೂರುಗಳು ಬಂದಿವೆ. ಈ ನಿಟ್ಟಿನಲ್ಲಿ ಈಗಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತದೆ” ಎಂದಿದ್ದಾರೆ.

      “ಸರ್ಕಾರ ಎಪ್ರಿಲ್‌‌ ತಿಂಗಳ ನಂತರ ಕಾರ್ಡ್‌ ಹೊಂದಿರುವವರ ಪರಿಶೀಲನೆ ನಡೆಸಲಿದೆ. ಈ ಸಂದರ್ಭ ಎಲ್ಲಾ ಸೌಲಭ್ಯವಿದ್ದು, ಬಿಪಿಎಲ್‌‌ ಕಾರ್ಡ್‌ ಹೊಂದಿದ್ದಲ್ಲಿ, ಅವರಿಗೆ ದಂಡದೊಂದಿಗೆ ಶಿಕ್ಷೆಯೂ ನೀಡಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ