ಶ್ರೀನಗರ:
ಪುಲ್ವಾಮಾದಲ್ಲಿ 44 ಯೋಧರನ್ನು ಬಲಿಪಡೆದ ಪುಲ್ವಾಮಾ ಉಗ್ರ ದಾಳಿಯ ಪ್ರಧಾನ ಸಂಚುಕೋರ ಜೈಷೆ ಮೊಹಮ್ಮದ್ ಉಗ್ರ 21 ವರ್ಷ ವಯಸ್ಸಿನ ಚಿಗುರು ಮೀಸೆ ತರುಣ ಮುದಾಸಿರ್ ಅಹ್ಮದ್ ಖಾನ್ ಅಲಿಯಾಸ್ ಮೊಹಮ್ಮದ್ ಭಾಯ್ ಎಂದು ಗುರುತಿಸಲಾಗಿದೆ.
ಭೀಕರ ಆತ್ಮಹತ್ಯಾ ದಾಳಿಯ ಎಲೆಕ್ಟ್ರೀಶಿಯನ್ ಎಂದು ತಿಳಿದು ಬಂದಿದೆ. ದಾಳಿ ನಡೆಸಿದ ಬಾಂಬರ್‌ಗೆ ಕಾರು ಹಾಗೂ ಸ್ಫೋಟಕಗಳನ್ನು ನೀಡಿದ್ದು ಕೂಡ ಇವನೇ ಎಂದೂ ತಿಳಿದುಬಂದಿದೆ.
ಫೆ.14ರಂದು ಜಮ್ಮು ಕಾಶ್ಮೀರದಲ್ಲಿ ನಡೆದ ದಾಳಿಯ ತನಿಖೆ ನಡೆಸುತ್ತಿರುವ ಎನ್‌ಐಎ ಮೂಲಗಳು ಈ ಮಾಹಿತಿ ನೀಡಿದ್ದು, ಜೈಷ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯಲ್ಲಿ ಅಷ್ಟೇನೂ ಪರಿಚಿತನಲ್ಲದ ಮುದಾಸಿರ್ ಅಹ್ಮದ್ ಖಾನ್ ಅಲಿಯಾಸ್ ಮೊಹಮ್ಮದ್ ಭಾಯಿ ಈ ಕೃತ್ಯದ ಸಂಚು ರೂಪಿಸಿದವನು ಎಂದು ತಿಳಿಸಿವೆ.
ದಾಳಿ ನಡೆಸಿದ ಅಹಮ್ಮದ್ ಅದಿಲ್ ದಾರ್‌ಗೆ ಮಾರುತಿ ಇಕೋ ಮಿನಿವ್ಯಾನ್ ಹಾಗೂ ಭಾರಿ ಪ್ರಮಾಣದ ಸ್ಫೋಟಕಗಳನ್ನು ಕೂಡ ಈತನೇ ಕೊಡಿಸಿದ್ದ. ಇವನು ಪುಲ್ವಾಮಾ ಜಿಲ್ಲೆಯ ತ್ರಾಲ್‌ನಲ್ಲಿರುವ ಮೀರ್ ಮೊಹಲ್ಲಾದ ನಿವಾಸಿಯಾಗಿದ್ದು, ಆತನಿಗೆ ಸಂಪೂರ್ಣ ಕುರಾನ್ ಬಾಯಲ್ಲಿಯೇ ಇತ್ತು. ಧರ್ಮದ ಬಗ್ಗೆ ಆತನ ಅಭಿಮಾನ ಹೆಚ್ಚುತ್ತ ಹೋಯಿತು. 2016ರಲ್ಲಿ ಬುರ್ಹಾನ್ ವಾನಿ ಸಾವನ್ನಪ್ಪಿದ ಬಳಿಕ ನಡೆದ ಕಲ್ಲು ತೂರಾಟದಲ್ಲಿ ಆತನ ಕಾಲಿಗೆ ಗುಂಡು ತಗುಲಿತ್ತು. ಬಳಿಕ ಆತ ಮೂಲಭೂತವಾದಿಯಾಗಿ ಬದಲಾದ ಎಂದು ಹೇಳಲಾಗುತ್ತಿದೆ.
ಪದವಿ ಶಿಕ್ಷಣ ಹಾಗೂ ನಂತರ ಒಂದು ವರ್ಷದ ಎಲೆಕ್ಟ್ರಿಕಲ್ ಡಿಪ್ಲೊಮಾ ಪಡೆದು 2017ರಲ್ಲಿ ಜೈಷ್ ಸಂಘಟನೆಗೆ ಸೇರಿದ್ದ. ಈತನ ತಂದೆ ಕೂಲಿ ಕಾರ್ಮಿಕ. ದಾಳಿ ನಡೆಸಿದ ಆತ್ಮಹತ್ಯಾ ಬಾಂಬರ್ ಅದಿಲ್ ದಾರ್ ಈತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂದು ಮೂಲಗಳು ಹೇಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ