ನವದೆಹಲಿ :

ಈ ವರ್ಷ ಪ್ರವಾಹದಿಂದ ತತ್ತರಿಸಿರುವ ದೇಶದ ವಿವಿಧ 6 ರಾಜ್ಯಗಳ ನೈಸರ್ಗಿಕ ವಿಪತ್ತಿಗೆ ಸಂಬಂಧಿಸಿದಂತೆ 4,382 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ (ಎಚ್‌ಎಲ್‌ಸಿ) ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಸಿಕ್ಕಿಂ ರಾಜ್ಯಗಳಿಗೆ 4,381.88 ಕೋಟಿ ರೂ ನೆರವು ನೀಡಲು ಅನುಮೋದನೆ ನೀಡಿದೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಜ್ಯದಾದ್ಯಂತ ಭಾರಿ ಮಳೆಯಿಂದ ಪ್ರವಾಹ ತಲೆದೋರಿ ಉಂಟಾಗಿದ್ದ ಭೂಕುಸಿತ ಮತ್ತು ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ಈ ಮೂಲಕ ನೆರವು ದೊರೆಯಲಿದೆ.

ಅಂಫಾನ್’ ಚಂಡಮಾರುತದಿಂದ ಹಾನಿಗೊಳಗಾದ ಪಶ್ಚಿಮ ಬಂಗಾಳಕ್ಕೆ 2,707.77 ಕೋಟಿ ರೂ ಮತ್ತು ಒಡಿಶಾಕ್ಕೆ 128.23 ಕೋಟಿ ರೂ ನೀಡಲಾಗಿದೆ. ಮಹಾರಾಷ್ಟ್ರಕ್ಕೆ ‘ನಿಸರ್ಗ’ ಚಂಡಮಾರುತದಿಂದ ಉಂಟಾದ ಹಾನಿಗಾಗಿ 268.59 ಕೋಟಿ ರೂ ಮಂಜೂರು ಮಾಡಲಾಗಿದೆ.
ನೈಋತ್ಯ ಮುಂಗಾರಿನಿಂದ ಪ್ರವಾಹ ಮತ್ತು ಭೂಕುಸಿತ ಉಂಟಾಗಿ ತೀವ್ರ ನಷ್ಟ ಅನುಭವಿಸಿದ ಕರ್ನಾಟಕಕ್ಕೆ 577.84 ರೂ. ನೆರವು ಮಂಜೂರು ಮಾಡಲಾಗಿದೆ. ಜತೆಗೆ ಮಧ್ಯಪ್ರದೇಶಕ್ಕೆ 611.61 ಕೋಟಿ ರೂ ಮತ್ತು ಸಿಕ್ಕಿಂಗೆ 87.84 ಕೋಟಿ ರೂ. ನೀಡಲಾಗಿದೆ.
ಈಗಾಗಲೇ ಎಲ್ಲ 28 ರಾಜ್ಯಗಳಿಗೆ ಪ್ರಸಕ್ತ ಸಾಲಿನ ರಾಜ್ಯಗಳ ನೈಸರ್ಗಿಕ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್) ಅಡಿ ಒಟ್ಟು 15,524.43 ಕೋಟಿ ಪರಿಹಾರವನ್ನು ಒದಗಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








