ಬೆಳಗಾವಿ :
ರಾಜ್ಯದ ಪಡಿತರದಾರರಿಗೆ ಇನ್ಮುಂದೆ ಅಕ್ಕಿಯೊಂದಿಗೆ ರಾಗಿ ಮತ್ತು ಜೋಳ ಕೂಡ ವಿತರಣೆಯಾಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಕೂಡ ಅನುಮೋದನೆ ಮಾಡಿ ಗ್ರೀನ್ ಸಿಗ್ನಲ್ ನೀಡಿದೆ.
ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಈ ಕುರಿತು ಮಾಹಿತಿ ನೀಡಿದ್ದು, ‘ಪಡಿತರದಲ್ಲಿ ಅಕ್ಕಿ ಮತ್ತು ಗೋಧಿ ವಿತರಣೆಯ ಪ್ರಮಾಣ ಕಡಿತಗೊಳಿಸಲಾಗುವುದು. ಅದೇ ಪ್ರಮಾಣದಲ್ಲಿ ರಾಗಿ, ಜೋಳ ಅಥವಾ ಸ್ಥಳೀಯವಾಗಿ ಬಳಕೆಯಲ್ಲಿರುವ ಧಾನ್ಯ ವಿತರಿಸಲು ಅವಕಾಶ ಕೊಡುವಂತೆ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ರಾಜ್ಯ ಸಚಿವ ರಾವ್‌ಸಾಹೇಬ್ ದಾನ್ವೆ ಅವರನ್ನು ದೆಹಲಿಯಲ್ಲಿ ಈಚೆಗೆ ಭೇಟಿಯಾಗಿ ಮನವಿ ಸಲ್ಲಿಸಿದ್ದೆ’ ಎಂದು ತಿಳಿಸಿದ್ದಾರೆ.
‘ಉತ್ತರದ ಜಿಲ್ಲೆಗಳಲ್ಲಿ 3 ಕೆ.ಜಿ. ಜೋಳ ಮತ್ತು 2 ಕೆ.ಜಿ. ಅಕ್ಕಿ ಹಾಗೂ ದಕ್ಷಿಣದ ಜಿಲ್ಲೆಗಳಲ್ಲಿ 3 ಕೆ.ಜಿ. ರಾಗಿ ಹಾಗೂ 2 ಕೆ.ಜಿ. ಅಕ್ಕಿ ಕೊಡಲಾಗುವುದು. ಭೌಗೋಳಿಕವಾಗಿ ಸ್ಥಳೀಯರ ಆಹಾರ ಪದ್ಧತಿಗೆ ಅನುಗುಣವಾಗಿ ಪಡಿತರ ವಿತರಿಸಬೇಕಾಗುತ್ತದೆ. ರಾಜ್ಯದಲ್ಲಿ ಈಗ ಅಕ್ಕಿ ಮತ್ತು ಗೋಧಿಯನ್ನು ಮಾತ್ರ ಕೊಡಲಾಗುತ್ತಿದೆ. ಭೌಗೋಳಿಕ ಆಹಾರ ಪದ್ಧತಿಗೆ ವಿರುದ್ಧವಾಗಿ ಒಂದೇ ವಿಧದ ಆಹಾರ ಸೇವನೆಯಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದರು.
‘ರಾಜ್ಯದಲ್ಲಿ ಬೆಳೆಯುವ ಜೋಳ, ಭತ್ತ ಹಾಗೂ ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿ ಏ.1ರಿಂದ ಪಡಿತರ ವ್ಯವಸ್ಥೆಯಲ್ಲಿ ನೀಡಲಾಗುವುದು’ ಎಂದು ಪ್ರತಿಕ್ರಿಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ