ಬೆಂಗಳೂರು :
ಜುಲೈ 30 ಮತ್ತು 31ರಂದು ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ನಡೆಸಲಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿಎಸ್ ಅಶ್ವತ್ಥ್ ನಾರಾಯಣ್ ಸ್ಪಷ್ಟ ಪಡಿಸಿದ್ದಾರೆ.
ಕೋವಿಡ್-19 ಆತಂಕದ ನಡುವೆಯೂ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ್ದ ರಾಜ್ಯ ಸರಕಾರವು ಇದೀಗ ಇದೇ ಜುಲೈ 30 ಮತ್ತು 31ರಂದು ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ನಡೆಸಲಿದೆ.
ಜು.30 ರಿಂದ ನಡೆಯಲಿರುವ ಸಿಇಟಿ ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು, ಜಿಲ್ಲೆಯ 4,440 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದು, ಕೋವಿಡ್-19 ಸೋಂಕು ಹಿನ್ನಲೆಯಲ್ಲಿ ಇತ್ತೀಚಿಗೆ ದ್ವಿತೀಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ನಡೆಸಿದ ರೀತಿಯಲ್ಲಿಯೇ ಎಚ್ಚರದಿಂದ ಈ ಪರೀಕ್ಷೆಗಳನ್ನು ಮಾಡಬೇಕಾಗಿದೆ.
ಗಡಿನಾಡು ವಿದ್ಯಾರ್ಥಿಗಳ ಕನ್ನಡ ಪರೀಕ್ಷೆಯನ್ನು ಅಗಸ್ಟ್ 1ರಂದು ನಡೆಸಲಾಗುವುದು. ರಾಜ್ಯದಲ್ಲಿ ಒಟ್ಟು 1,94,356 ವಿದ್ಯಾರ್ಥಿಗಳು 120 ಸ್ಥಳಗಳ 497 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಅವರು ತಿಳಿಸಿದರು.
ಬೆಂಗಳೂರು ಮಹಾನಗರದಲ್ಲಿ 83 ಕೇಂದ್ರಗಳ ವ್ಯವಸ್ಥೆ ಮಾಡಲಾಗಿದ್ದು, 40,200 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ 30 ಮಂದಿ ವಿದೇಶಿಯರೂ ಇದ್ದಾರೆ. ಪರೀಕ್ಷೆಯ ಸಮಯ ಬೆಳಗ್ಗೆ 10.30ರಿಂದ 11.50 ಗಂಟೆ ಹಾಗೂ ಮಧ್ಯಾಹ್ನ 2.30ರಿಂದ 3.30 ಗಂಟೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಮುನ್ನೆಚ್ಚರಿಕೆ ಮತ್ತು ಸಕಲ ಸಿದ್ಧತೆ :
ಪರೀಕ್ಷೆ ಕೇಂದ್ರದೊಳಗೆ ಬರುವ ವಿದ್ಯಾರ್ಥಿಗಳನ್ನು ಮೊದಲು ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸಬೇಕು, ನಂತರವೇ ಪರೀಕ್ಷಾ ಕೊಠಡಿಗೆ ಅವರನ್ನು ಬಿಡಬೇಕು, ಅವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಜರ್ ನೀಡಬೇಕು ಮತ್ತು ಪರಸ್ಪರ ಮೂರು ಅಡಿಗಳ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
ಕೇಂದ್ರದಲ್ಲಿ ಶೌಚಾಲಯ ಸ್ವಚ್ಛವಿರಬೇಕು, ಕಾಯಿಸಿದ ನೀರನ್ನು ಬಾಟಲಿಯಲ್ಲಿ ತರಬೇಕು, ಪರೀಕ್ಷಾ ಕೇಂದ್ರದೊಳಗೆ ಕೈ ಗಡಿಯಾರ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಕೊಠಡಿಯ ಗೋಡೆ ಮೇಲೆ ಗಡಿಯಾರ ಹಾಕಬೇಕು, ಪ್ರತಿ ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪಿಠೋಪಕರಣ ವ್ಯವಸ್ಥೆ ಮಾಡಿಕೊಳ್ಳಬೇಕು, ಅದಕ್ಕೂ ಮುನ್ನ ಪರೀಕ್ಷಾ ಕೇಂದ್ರಗಳಿಗೆ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಬೇಕು ಎಂದು ಸಚಿವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ