ಶಿವಮೊಗ್ಗ:
ರೈಲಿಗೆ ಸಿಲುಕಿ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ಇಂದು ಬೆಳಕಿಗೆ ಬಂದಿದೆ.
ತಾಲೂಕಿನ ಕೊನಗನಹಳ್ಳಿಯ ಬಳಿ ಚಿರತೆಯ ಶವ ಕಂಡುಬಂದಿದ್ದು, ನಿನ್ನೆ ಬೆಳಿಗ್ಗೆ ಮಂಜು ಹೆಚ್ಚಾಗಿದ್ದರಿಂದ ತಾಳಗುಪ್ಪದಿಂದ ಶಿವಮೊಗ್ಗಕ್ಕೆ ಹೋಗುವ ರೈಲಿಗೆ ಸಿಲುಕಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
ಇಲ್ಲಿನ ರೈತರ ಪ್ರಕಾರ, ನಿನ್ನೆ ಮಂಜು ಹೆಚ್ಚಾದ ಕಾರಣ ರೈಲು ಬಹಳ ಹೊತ್ತು ಹಾರ್ನ್ ಹೊಡೆದುಕೊಂಡು ಚಲಿಸುತ್ತಿತ್ತು. ಚಿರತೆ ರೈಲಿಗೆ ಸಿಲುಕುವ ಮುನ್ಸೂಚನೆ ದೊರೆತು ಹೀಗೆ ಶಬ್ದ ಮಾಡಿರಬಹುದು ಎಂದು ಈ ಭಾಗದ ಜನ ತಿಳಿಸಿದ್ದಾರೆ.
ಇನ್ನು ಚಿರತೆಯ ತಲೆಗೆ ಹೊಡೆತ ಬಿದ್ದಿದೆ. ಹಲ್ಲು ಮತ್ತು ಉಗುರನ್ನು ತೆಗೆಯದೆ ಇರುವುದರಿಂದ ಕೊಲೆ ಮಾಡಿರುವ ಶಂಕೆ ಕಂಡುಬರುತ್ತಿಲ್ಲ ಎನ್ನಲಾಗಿದೆ.
ಶಂಕರ ವಲಯದ ಆರ್ ಎಫ್ ಒ ಜಯೇಶ್ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಕಲೆಹಾಕಿದ್ದಾರೆ. ಇದು ಚಿರತೆ ಓಡಾಡುವ ಸ್ಥಳವಲ್ಲ, ಆಹಾರ ಹುಡುಕಿಕೊಂಡು ಬಂದಿರಬಹುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
