ನಾಳೆ ಹುಟ್ಟೂರು ಬೈರನಾಯ್ಕನಹಳ್ಳಿಯಲ್ಲಿ ಚನ್ನಿಗಪ್ಪ ಅಂತ್ಯಕ್ರಿಯೆ

 ತುಮಕೂರು:

      ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಾಜಿ ಸಿಚಿವ ಸಿ.ಚನ್ನಿಗಪ್ಪ ಅವರು, ಚಿಕಿತ್ಸೆ ಫಲಕಾರಿಯಾಗದೆ ಶಿವರಾತ್ರಿ ಹಬ್ಬದಂದೇ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.

      ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಮೂರು ಬಾರಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಚನ್ನಿಗಪ್ಪ ಅವರು ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾಗಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇಲೆ ಸಲ್ಲಿಸಿದ್ದರು.

      ತಮ್ಮ ವಿಶಿಷ್ಟಿವಾದ ಮಾತಿನ ಶೈಲಿಯಿಂದಲೆ ಇಡೀ ರಾಜ್ಯದ ಗಮನ ಸೆಳೆದಿದ್ದ ಅವರು ಕೊರಟಗೆರೆ ಮನೆ ಮಗನಾಗಿದ್ದರು. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಬೈರನಾಯಕನಹಳ್ಳಿಯವರಾದ ಚನ್ನಿಗಪ್ಪ ಅವರು, ಕೊರಟಗೆರೆ ಕ್ಷೇತ್ರದಿಂದ ಯಾರೇ ಅವರ ಮನೆಗೆ ಹೋದರೂ ಬರಿಗೈಯಿಂದ ಕಳುಹಿಸುತ್ತಿರಲಿಲ್ಲ.

     ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಬೈರನಾಯಕನಹಳ್ಳಿ ಮಜರೆ ಗ್ರಾಮ ದೊಡ್ಡಹುಚ್ಚಯ್ಯನಪಾಳ್ಯದ ಕೃಷಿಕರಾದ ಚಿನ್ನಮ್ಮ, ಚನ್ನರಾಯಪ್ಪ ಅವರ ಎರಡನೇ ಪುತ್ರರಾಗಿ ಜನಿಸಿದ ಸಿ. ಚನ್ನಿಗಪ್ಪ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಮುಗಿಸಿ ಬಿಎ, ಬಿಇಡಿ ಪದವಿಯನ್ನು ಮಾಡಿದರು.

      ಆನಂತರ ಉದ್ಯೋಗ ಅರಸಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಕೆಲಸಕ್ಕೆ ಸೇರಿಕೊಂಡು ಬಹಳ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು. ನಂತರ ಪೊಲೀಸ್ ಪೇದೆ ಕೆಲಸಕ್ಕೆ ರಾಜಿನಾಮೆ ನೀಡಿ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಉದ್ಯಮವೊಂದನ್ನು ಪ್ರಾರಂಭಿಸಿದ ಅವರು ಕೆಲವೇ ವರ್ಷಗಳಲ್ಲಿ ದೊಡ್ಡ ಕೈಗಾರಿಕೋಧ್ಯಮಿಯಾಗಿ ಹೊರಹೊಮ್ಮಿದರು.

ದೇವೇಗೌಡರ ಕುಟುಂಬದಲ್ಲಿ ನಂಟು:

Image result for devegowda

      ಒಕ್ಕಲಿಗ ಸಮುದಾಯಕ್ಕೆ ಸೇರಿದ ಚೆನ್ನಿಗಪ್ಪ ಅವರು ರಾಜಕೀಯದಲ್ಲಿನ ಆಸಕ್ತಿಯಿಂದ ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡರೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡರು. ಕೆಲವೇ ದಿನಗಳಲ್ಲಿ ದೇವೇಗೌಡ ಕುಟುಂಬದೊಂದಿಗೆ ಆಪ್ತತೆಯನ್ನು ಬೆಳೆಸಿಕೊಂಡು ಮನೆ ಮಗನಂತೆ ಗುರುತಿಸಿಕೊಂಡರು.

ಮೊದಲ ಬಾರಿ ಶಾಸಕರಾಗಿ ಆಯ್ಕೆ:

      1993ರಲ್ಲಿ ಮೊದಲ ಬಾರಿಗೆ ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದ್ದ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಭವಿಷ್ಯಕ್ಕೆ ಮುನ್ನುಡಿ ಬರೆದರು. ಮೊದಲ ಬಾರಿಗೆ ಜೆಡಿಎಸ್ ನಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಜಿ.ವೆಂಕಟಾಚಲಯ್ಯ ವಿರುದ್ಧ ಜಯ ಸಾಧಿಸಿ ಶಾಸಕರಾಗಿ ಆಯ್ಕೆಯಾದರು. ಆಯ್ಕೆಯಾದ ನಂತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಬಲಿಷ್ಟಗೊಳಿಸುವ ಮೂಲಕ ಜಿಲ್ಲೆಯಾದ್ಯಂತ ಗುರುತಿಸಿಕೊಂಡರು.

ಮೊದಲಬಾರಿ ಸಚಿವರಾಗಿ ಆಯ್ಕೆ :

Image result for chennigappa engineering college

      1998ರಲ್ಲಿ 2ನೇ ಬಾರಿಗೆ ಸ್ಪರ್ಧೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸಿ.ವೀರಭದ್ರಯ್ಯ ಅವರ ವಿರುದ್ಧ ಮತ್ತೆ ಶಾಸಕರಾಗಿ ಆಯ್ಕೆಯಾದರು. ಮೂರನೇ ಬಾರಿಗೆ 2003ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೀಸೆ ರಂಗಸ್ವಾಮಿ ವಿರುದ್ಧ ಮೂರನೇ ಭಾರಿ ಶಾಸಕರಾಗಿ ಜಯಭೇರಿ ಬಾರಿಸುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ ಅವರು ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್, ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಮೊದಲ ಬಾರಿಗೆ ರೇಷ್ಮೆ ಖಾತೆ ಸಚಿವರಾಗಿ ಆಯ್ಕೆಯಾದರು.

      ನಂತರದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮುರಿದು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮೊದಲನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಅರಣ್ಯ, ಅಬಕಾರಿ, ಪರಿಸರ, ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರಾಗಿಯೂ ಕೆಲಸ ನಿರ್ವಹಿಸಿದರು.

Image result for chennigappa engineering college

      ಇದೇ ವೇಳೆ ತಮ್ಮ ಹುಟ್ಟೂರಾದ ಬೈರನಾಯ್ಕನಹಳ್ಳಿ ಬಳಿ ಡಾ.ಶಿವಕುಮಾರ ಮಹಾಸ್ವಾಮಿ ಅವರ ಹೆಸರಿನಲ್ಲಿ ಡಿಪ್ಲೋಮಾ, ಇಂಜಿನಿಯರ್ ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಿದರು.

      2008ರ ಉಪಚುನಾವಣೆಯಲ್ಲಿ ಸೋಲುಂಡ ನಂತರ ಮತ್ತೆ ಜೆಡಿಎಸ್ ಸೇರಿಕೊಂಡು ತುಮಕೂರು ಜಿಲ್ಲಾ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದರು. ಕೊರಟಗೆರೆ ಕ್ಷೇತ್ರದಲ್ಲಿ ಮೂರು ಬಾರಿ ಹ್ಯಾಟ್ರಿಕ್ ಜಯ ಸಾಧಿಸಿ ಶಾಸಕ, ಸಚಿವರಾದ ಚನ್ನಿಗಪ್ಪ ಪಟ್ಟಣ ಸೇರಿದಂತೆ 18 ಹಳ್ಳಿಗಳಿಗೆ ಹೇಮಾವತಿ ಕುಡಿಯುವ ನೀರಿನ ಯೋಜನೆ, ಮಿನಿ ವಿಧಾನಸೌಧ, ನ್ಯಾಯಾಲಯ ಕಟ್ಟಡ ನಿರೀಕ್ಷಣಾ ಮಂದಿರ ಹಾಗೂ ಅನೇಕ ಜಿಲ್ಲಾ ಪಂಚಾಯತ್ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಗೆ ಸೇರಿಸುವ ಮೂಲಕ ಮೇಲ್ದರ್ಜೆಗೆ ಏರಿಸಿದರು.

      ತಾಲ್ಲೂಕಿನ ಗಡಿಭಾಗದವಾದ ಬೊಮ್ಮಲದೇವಿಪುರ, ಐ.ಕೆ. ಕಾಲೋನಿಯಲ್ಲಿ ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಗೊಡ್ರಹಳ್ಳಿಯ ಬಿಸಿಎಂ ವಿದ್ಯಾರ್ಥಿ ನಿಲಯ, ದಾಸರಹಳ್ಳಿ, ಕೋಡ್ಲಹಳ್ಳಿ ಕಟ್ಟೆಬಾರೆ ಪ್ರೌಢಶಾಲೆ, ಪ್ರಥಮ ದರ್ಜೆ ಕಾಲೇಜು ಕಟ್ಟಡ, ಸಮುದಾಯ ಭವನಗಳು ಅವರ ಆಡಳಿತಾವಧಿಯಲ್ಲಿ ನಿರ್ಮಾಣವಾದವು. ತಾಲ್ಲೂಕಿನ ಬಹುಬೇಡಿಕೆಯಾಗಿದ್ದ ಹೇಮಾವತಿ ಕುಡಿಯುವ ನೀರು ಯೋಜನೆ ಚನ್ನಿಗಪ್ಪ ಅವರ ಕಾಲದಲ್ಲಿ ಆದ ಮಹತ್ತರ ಯೋಜನೆಯಾಗಿದೆ.

      ಮೃತರು ಪತ್ನಿ ಸಿದ್ದಗಂಗಮ್ಮ, ಶಾಸಕ ಡಿ.ಸಿ.ಗೌರಿಶಂಕರ್, ಕೈಗಾರಿಕೋದ್ಯಮಿ ಡಿ.ಸಿ.ಅರುಣ್ ಕುಮಾರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಡಾ. ಶಿವಕುಮಾರ ಮಹಾಸ್ವಾಮಿ ವಿದ್ಯಾಲಯದ ಕಾರ್ಯದರ್ಶಿ ಡಿ.ಸಿ.ವೇಣುಗೋಪಾಲ ಸೇರಿದಂತೆ ಮೂರು ಜನ ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ ನಾಗರತ್ನ ಹಾಗೂ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link