ಕೆನ್ನೆಡಲು ಗ್ರಾಮಕ್ಕೆ ವಿವಿ ಸಾಗರ ನೀರಿನ ಪೂರೈಕೆ -ಡಿಸಿ

 ಚಿತ್ರದುರ್ಗ:

      ವಾಣಿವಿಲಾಸ ಸಾಗರದಿಂದ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್‍ಪ್ರಿಯಾ ಹೇಳಿದರು.

      ತಾಲ್ಲೂಕಿನ ಕೆನ್ನೆಡಲು ಗ್ರಾಮದಲ್ಲಿ ಜಿಲ್ಲಾ ಆಡಳಿತದಿಂದ ಏರ್ಪಡಿಸಲಾದ ಜನಸಂಪರ್ಕ ಹಾಗೂ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.

      ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗಾಗಿ, ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರದಿಂದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು. ಗ್ರಾಮದಲ್ಲಿ ಜನರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಪೂರೈಸಲಾಗುವುದು. ಸರ್ಕಾರದ ಯೋಜನೆಗಳನ್ನು ಜನರಿಗೆ ನೇರವಾಗಿ ದೊರೆಕುವಂತೆ ಮಾಡಲಿಕ್ಕಾಗಿ ಗ್ರಾಮ ವಾಸ್ತವ್ಯವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಹ ಬಂದಿದ್ದು, ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

      ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಡೆ ಗ್ರಾಮದ ಕಡೆ, ನಮ್ಮ ನಡೆ ಅಭಿವೃದ್ದಿಯ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಈ ದಿನ ಜಿಲ್ಲಾ ಮಟ್ಟದ ಪ್ರತಿ ಇಲಾಖೆಯ ಅಧಿಕಾರಿಗಳು ಮನೆಯ ಬಾಗಿಲಿಗೆ ಬಂದು ಗ್ರಾಮದಲ್ಲಿನ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ. ಈ ವೇಳೆ ಹಲವು ಬಗೆಯ ಸರ್ಕಾರದ ಯೋಜನೆಗಳ ಸೌಲಭ್ಯಗಳನ್ನು ಜನರಿಗೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ಗ್ರಾಮ ವಾಸ್ತವ್ಯದಿಂದ ಆಡಳಿತ ಯಂತ್ರವನ್ನು ಜನರ ಮನೆ ಬಾಗಿಲಿಗೆ ಹೋಗಿ ಸರ್ಕಾರದ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ನ್ಯಾಯಬದ್ದವಾಗಿ ಕಲ್ಪಿಸಲಾತ್ತದೆ. ಗ್ರಾಮೀಣ ಭಾಗದ ಜನರು ಅಗತ್ಯ ಸರ್ಕಾರದ ಸವಲತ್ತು ಪಡೆಯಲು ದಿನಗಟ್ಟಲೆ ಇಲಾಖೆಗೆ ಅಲೆಯಬೇಕಾಗುತ್ತದೆ, ಆದರೂ ಅವರ ಕೆಲಸ ಕಾರ್ಯಗಳು ಪೂರ್ಣಗೊಳ್ಳದೆ ಜಿಗುಪ್ಸೆ ಅನುಭವಿಸಿ, ಯೋಜನೆಗಳನ್ನು ಪಡೆಯುವಲ್ಲಿ ವಿಫಲರಾಗುತ್ತಾರೆ. ಅಧಿಕಾರಿಗಳಿಗೆ ತಮ್ಮ ಕೆಲಸಗಳು ತ್ವರಿತಗತಿಯಲ್ಲಾಗುವಂತೆ ಲಂಚವನ್ನು ಕೊಡುವ ಹಂತಕ್ಕೆ ಬಂದು, ಭ್ರಷ್ಟಚಾರವನ್ನು ಹುಟ್ಟಿಹಾಕುತ್ತಾರೆ. ಇಂತಹ ಸ್ಥಿತಿಯನ್ನು ಹೋಗಲಾಡಿಸಲು ಈ ರೀತಿಯ ಗ್ರಾಮಸಭೆ, ಜನಸಂಪರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಅವರು ಹೇಳಿದರು.

      ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಗೂ ಸದಸ್ಯೆ ಸೌಭಾಗ್ಯ ಬಸವರಾಜನ್ ಮಾತನಾಡಿ, ಕೆನ್ನೆಡಲು ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಇಲ್ಲಿಂದ 4 ಕಿಲೋ ಮೀಟರ್ ದೂರದ ಪಕ್ಕದ ಚಿಕ್ಕಸಿದ್ದವನಹಳ್ಳಿ ಗ್ರಾಮಕ್ಕೆ ವಿವಿ ಸಾಗರದಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದರೆ ಈ ಗ್ರಾಮಕ್ಕೆ ನೀರು ಕೊಡಲಾಗುತ್ತಿಲ್ಲ. ಇಂಗಳದಾಳ್ ಗ್ರಾಮದಲ್ಲಿನ ಚಿನ್ನದ ಗಣಿಯಿಂದ ಹೊರಗಿನವರು ಹೆಚ್ಚು ಅನುಕೂಲವನ್ನು ಪಡೆದುಕೊಂಡಿದ್ದು, ಈ ಭಾಗದ ಜನರು ಸೌಲಭ್ಯವಂಚಿತರಾಗಿದ್ದಾರೆ. ಇಲ್ಲಿನ ರೈತರು ಸಂಕಷ್ಟದಿಂದ ಜೀವನ ನಡೆಸುವ ಪರಸ್ಥಿತಿ ಇದೆ, ಇಲ್ಲಿನ ಜನರ ಸಮಸ್ಯೆ ಹೋಗಲಾಡಿಸಲು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕುರುಮರಡಿಕೆರೆ ಗ್ರಾಮದ ಕೆರೆಗೆ ನೀರು ತುಂಬಿಸುವ ಕಾರ್ಯ ಮಾಡಿದರೆ ಶಾಶ್ವತ ಪರಿಹಾರ ಕಲ್ಪಿಸಿದಂತಾಗುತ್ತದೆ. ಗ್ರಾಮವಾಸ್ತವ್ಯದ ಮೂಲಕ ಗ್ರಾಮದ ಜನರು ತಮ್ಮ ಸಮಸ್ಯೆಗಳನ್ನು ತಿಳಿಸಿ ಪರಿಹಾರ ಕಂಡುಕೊಳ್ಳಿ ಎಂದು ಕರೆ ನೀಡಿದರು.

      ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಾಂತರಾಜ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಡಿ.ಎಂ ಲಿಂಗರಾಜು, ಗ್ರಾಮ ಪಂಚಾಯತ್ ಅಧ್ಯಕ್ಷೆ ವರಲಕ್ಷ್ಮೀ, ತಾಲ್ಲೂಕು ಪಂಚಾಯತ್ ಸದಸ್ಯೆ ಶಿಲ್ಪ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಮಹೇಶ್, ವೆಂಕಟೇಶ್, ಮಚ್ಚೇಂದ್ರ, ಓಬಣ್ಣ, ನಾಗರಾಜ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಗ್ರಾಮವಾಸ್ತವ್ಯ ಮತ್ತು ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap