ಲಾಕ್ ಡೌನ್ ಕ್ಷೌರಿಕರು, ಆಟೋ, ಟ್ಯಾಕ್ಸಿ ಚಾಲಕರಿಗೆ 5 ಸಾವಿರ !!

ಬೆಂಗಳೂರು :

     ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಬಂಪರ್ ಗಿಫ್ಟ್ ವೊಂದನ್ನು ನೀಡಿದ್ದು, 1610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

      ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಕೊರೊನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಲಾಕ್ ಡೌನ್ ನಿಂದ ಆದಾಯ ಕಳೆದುಕೊಂಡಿರುವ ಕ್ಷೌರಿಕರು, ಆಟೋ ರಿಕ್ಷ ಚಾಲಕರು, ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ. ಪರಿಹಾರ, ಸಣ್ಣ ಮತ್ತು ಮದ್ಯಮ ಉದ್ಯಮಿಗಳಿಗೆ 2 ತಿಂಗಳ ವಿದ್ಯುತ್ ಬಿಲ್ ಮನ್ನಾ, ವಿದ್ಯುತ್ ಬಿಲ್ ಮುಂಗಡವಾಗಿ ಪಾವತಿಸುವ ಗ್ರಾಹಕರಿಗೆ ಶೇ. 1 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು.

      ಇನ್ನು ರಾಜ್ಯದಲ್ಲಿ ಲಾಕ್ ಡೌನ್ ನಿಂದ ರಾಜ್ಯದ ದೇವಸ್ಥಾನಗಳು ಬಂದ್ ಆಗಿದ್ದು, ಹೂ ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದು, ಪ್ರತಿ 1 ಹೆಕ್ಟೇರ್ ಗೆ 25 ಸಾವಿರ ರೂ. ಪರಿಹಾರ ನೀಡಲಾಗುವುದು. ತರಕಾರಿ ಮತ್ತು ಹಣ್ಣು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಲು ಒಂದು ಪ್ಯಾಕೇಜ್ ಘೋಷಣೆ ಮಾಡಲಾಗುವುದು ಎಂದರು.

     ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ನೇಕಾರರಿಗೆ 80 ಕೋಟಿ ರೂ. ಸಾಲಮನ್ನಾಕ್ಕೆ ಬಿಡುಗಡೆ, ಹೊಸ ಸಾಲ ಪಡೆಯಲು ನೇಕಾರರಿಗೆ ಅವಕಾಶ. ನೇಕಾರರ ಸಮ್ಮಾನ್ ಯೋಜನೆಯಡಿ ರಾಜ್ಯದ 54 ಸಾವಿರ ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ 2 ಸಾವಿರ ರೂ. ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು.

    15 ಲಕ್ಷ  ಕಟ್ಟಡ ಕಾರ್ಮಿಕರಿಗೆ ವಲಸೆ ಹೋಗುವುದನ್ನು ತಪ್ಪಿಸಲು  ಈಗಾಗಲೇ 2 ಸಾವಿರ ರೂ.ಪರಿಹಾರ ನೀಡಿದ್ದು, ಮತ್ತೆ 3 ಸಾವಿರ ರೂ.ಹೆಚ್ಚುವರಿಯಾಗಿ ನೀಡುತ್ತೇವೆ ಎಂದು ಭರವಸೆ ನಿಡಿದರು. ಒಟ್ಟಾರೆ 5 ಸಾವಿರ ರೂ. ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ