ಬೆಂಗಳೂರು:
ರಾಜಕೀಯ ಅಸ್ಥಿರತೆಯ ನಡುವೆಯೂ ಪೊಲೀಸರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ವೇತನ ಪರಿಷ್ಕರಣೆ ಹಾಗೂ ಬಡ್ತಿ ತಾರತಮ್ಯ ನಿವಾರಣೆ ಸೇರಿದಂತೆ ಪೊಲೀಸರ ಅನೇಕ ಬೇಡಿಕೆಗಳು ಹಾಗೂ ಸಮಸ್ಯೆಗಳಿಗೆ ಸಂಬಂಧಿಸಿದಂತೆ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ನೀಡಿರುವ ವರದಿ ಜಾರಿಗೆ ತೀರ್ಮಾನಿಸಿದೆ.
ಪೊಲೀಸರ ವೇತನ ಪರಿಷ್ಕರಣೆ ಕುರಿತು ನೀಡಲಾಗಿರುವ ವರದಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಗಳವಾರ ಅಂಕಿತ ಹಾಕಿದ್ದು, ಇಂದು ಸಂಜೆ ಅಧಿಕೃತ ಆದೇಶ ಹೊರಬೀಳಲಿದೆ.ಶೇ 30 ಕ್ಕೆ ಬದಲಾಗಿ ಶೇ. 12.5 ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ವರದಿ ಜಾರಿಯಿಂದ ಸರ್ಕಾರದ ಮೇಲೆ 630 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದ್ದು, ಆರ್ಥಿಕ ಹೊರೆಯನ್ನು ತಪ್ಪಿಸಲು ಮೂಲವರದಿಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ.
2016 ಜೂನ್ ನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವೇತನ ಪರಿಷ್ಕರಣೆ ಸಂಬಂಧ ಬೇಡಿಕೆ ಕೇಳಿಬಂದ ಹಿನ್ನೆಲೆಯಲ್ಲಿ ಈ ಸಂಬಂಧ ವರದಿ ಸಲ್ಲಿಸುವಂತೆ ಎಡಿಜಿಪಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ರಚಿಸಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ