ಬೆಂಗಳೂರು:
ಕೆಳವರ್ಗದವರು, ಬಡವರಿಗಾಗಿಯೇ ಹಿಂದಿನ ಕಾಂಗ್ರೆಸ್ ಸರ್ಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್ ನಲ್ಲಿ ಇನ್ನುಮುಂದೆ ಟೀ, ಕಾಫಿಯನ್ನೂ ನೀಡಲು ಬಿಬಿಎಂಪಿ ಮುಂದಾಗಿದೆ ಎಂದು ಸಚಿವ ಜಿ. ಪರಮೇಶ್ವರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಕೇವಲ ತಿಂಡಿ, ಊಟವನ್ನು ನೀಡಲಾಗುತ್ತಿದ್ದು, ಟೀ, ಕಾಫಿಯನ್ನೂ ನೀಡಬೇಕೆಂಬ ಬೇಡಿಕೆ ಬಂದಿದೆ. ಎಲ್ಲಾ ಕ್ಯಾಂಟೀನ್‌ನಲ್ಲೂ ಇದನ್ನು ಶೀಘ್ರವೇ ಪ್ರಾರಂಭಿಸಲಾಗುವುದು. ಆದರೆ ಇನ್ನೂ ದರ ನಿಗದಿ ಮಾಡಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ ಜಿ.ಪರಮೇಶ್ವರ ತಿಳಿಸಿದ್ದಾರೆ.
ಸರ್ಕಾರ ನೀಡುವ ಸೌಲಭ್ಯಗಳು ಮಧ್ಯವರ್ತಿಗಳ ಪಾಲಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಇಂತಹ ಸೇವೆಗಳನ್ನು ಪರಿಚಯಿಸುತ್ತಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ನೆರವಿನಿಂದ ಇನ್ನಷ್ಟು ಪಾರದರ್ಶಕ ಆಡಳಿತ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.
ನಿಯಮದ ಅನುಸಾರ ಇಂದಿರಾ ಕ್ಯಾಂಟಿನ್ ಗ್ರಾಹಕರು ಹೆಚ್ಚು ಆಹಾರ ಬೇಕಾದಲ್ಲಿ ಎರಡು ಟೋಕನ್ ತೆಗೆದುಕೊಳ್ಳಬೇಕಾದದ್ದು ಕಡ್ಡಾಯವಾಗಿದೆ. ಆದರೆ ಮುಂದಿನ ದಿನದಲ್ಲಿ ಒಂದೇ ಟೋಕನ್ ಅಡಿಯಲ್ಲಿ ಹೆಚ್ಚು ಉತ್ತಮ, ಸಾಕಷ್ಟು ಪ್ರಮಾಣದ ಉಪಹಾರವನ್ನು ಗ್ರಾಹಕ ನಿರೀಕ್ಷಿಸಬಹುದಾಗಿದೆ. ಆದರೆ ಮದ್ಯಾಹ್ನದ ಊಟ ಹಾಗೂ ರಾತ್ರಿಯ ಭೋಜನ ಪ್ರಮಾಣದಲ್ಲಿ ಯಾವ ಬದಲಾವಣೆ ಇರುವುದಿಲ್ಲ.