ತುಮಕೂರು:
ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ತುಮಕೂರು ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ.
ಕಾಂಗ್ರೆಸ್ ಪಕ್ಷದ ಬಿ ಫಾರಂ ಸಲ್ಲಿಸಲು ವಿಫಲರಾದ ಕಾರಣ ಮುದ್ದಹನುಮೇಗೌಡರ ನಾಮಪತ್ರ ತಿರಸ್ಕೃತಗೊಂಡಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ಅಂಗೀಕಾರವಾಗಿದೆ. ಹೀಗಾಗಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮುದ್ದಹನುಮೇಗೌಡರು ಕಣಕ್ಕಿಳಿಯಲಿದ್ದಾರೆ.
ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ 20 ಹಾಗೂ ಜೆಡಿಎಸ್ 8 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ಕಾಂಗ್ರೆಸ್ ಸಂಸದರು ಪ್ರತಿನಿಧಿಸುತ್ತಿದ್ದ ತುಮಕೂರು ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಇಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ.
ಮೈತ್ರಿ ಕಾರಣಕ್ಕೆ ತಮಗೆ ಟಿಕೆಟ್ ಕೈ ತಪ್ಪಿದ್ದರಿಂದ ತೀವ್ರವಾಗಿ ಆಕ್ರೋಶಗೊಂಡಿದ್ದ ಹಾಲಿ ಸಂಸದ ಮುದ್ದಹನುಮೇಗೌಡ ಈ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ 2 ನಾಮಪತ್ರಗಳನ್ನು ಸಲ್ಲಿಸಿದ್ದರು. ಇದೀಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರು ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿದೆ.
ಇನ್ನು ನಾಮಪತ್ರ ಹಿಂಪಡೆಯುವಂತೆ ಸಂಸದ ಎಸ್.ಪಿ.ಮುದ್ದಹನುಮೇಗೌಡರ ಮನವೊಲಿಸುವ ಪ್ರಯತ್ನವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೇರಿದಂತೆ ಹಲವರು ಮುಂದುವರೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ